
ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇತ್ತೀಚೆಗಷ್ಟೇ ಮುಗಿದಿದೆ. ಈ ಸರಣಿಯಲ್ಲಿ ಶ್ರೀಲಂಕಾ ತಂಡ ಭಾರತ ಬಿ ತಂಡದ ಎದುರು ಸೋತು ಶರಣಾಗಿದೆ.
ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಕಾರಣ ತಂಡದಿಂದ ಹೊರಗುಳಿದ ಕೆಲ ಆಟಗಾರರು ಮತ್ತು ಯುವ ಆಟಗಾರರನ್ನು ಒಳಗೊಂಡಂತೆ ಹೊಸ ತಂಡವನ್ನು ರಚಿಸಿ ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಲಾಯಿತು. ಹೀಗೆ ಭಾರತ ಬಿ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಿದ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಭಾರತ ಬಿ ತಂಡ ಸೋಲಲಿದೆ, ಹಲವಾರು ಅನುಭವವುಳ್ಳ ಆಟಗಾರರು ಇಲ್ಲದೇ ಇರುವ ಕಾರಣ ಲಂಕಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ತೋರಲಿದೆ ಎಂಬ ಮಾತುಗಳು ಹರಿದಾಡಿದ್ದವು.
ಆದರೆ ಈ ಎಲ್ಲಾ ಅನುಮಾನಗಳಿಗೆ ಟೀಮ್ ಇಂಡಿಯಾ ಆಟಗಾರರು ತೆರೆ ಎಳೆದಿದ್ದು ಶ್ರೀಲಂಕಾವನ್ನು 2-1 ಅಂತರದಲ್ಲಿ ಸೋಲಿಸಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ 5 ಯುವ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ 'ಕೇವಲ 2 ತಂಡ ಮಾತ್ರವಲ್ಲ ಭಾರತದ 4 ತಂಡಗಳನ್ನು ರಚಿಸಿ ವಿಶ್ವದ ಯಾವುದೇ ಸರಣಿಯನ್ನು ಬೇಕಾದರೂ ಗೆಲ್ಲುವಷ್ಟು ಸಾಮರ್ಥ್ಯ ಭಾರತಕ್ಕಿದೆ' ಎಂದು ಹೇಳಿದರು.