
ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಟಿ20 ವಿಶ್ವಕಪ್ ಆಯೋಜನೆಗೆ ನಮ್ಮಲ್ಲಿ ಬೇರೆ ಯೋಜನೆಯಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಮಧ್ಯಂತರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆಫ್ ಅಲ್ಲಾರ್ಡೈಸ್ ಹೇಳಿದ್ದಾರೆ.
ಭಾರತದಲ್ಲಿ ಮುಂಬೈ ಸೇರಿದಂತೆ ದೆಹಲಿ, ಬೆಂಗಳೂರು ಇಂಥ ಮಹಾನಗರಗಳಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಟಿ20 ವಿಶ್ವಕಪ್ ನಡೆಸುವ ಬಗ್ಗೆ ನಮ್ಮಲ್ಲಿ ಬೇರೆ ಯೋಜನೆಯಿದೆ. ಆದರೆ ಸದ್ಯಕ್ಕೆ ಅಂಥ ಯಾವುದೇ ಯೋಜನೆಗಳತ್ತ ಗಮನ ಹರಿಸುತ್ತಿಲ್ಲ. ಈಗಿನವರೆಗೆ ಹಿಂದಿನ ವೇಳಾಪಟ್ಟಿಯಂತೆ ಭಾರತದಲ್ಲೇ ಟಿ20 ವಿಶ್ವಕಪ್ ನಡೆಯಲಿದೆ ಎಂದು ಜೆಫ್ ಅಲ್ಲಾರ್ಡೈಸ್ ಮಾಹಿತಿ ನೀಡಿದ್ದಾರೆ.
ಈ ವರ್ಷ ಪುರುಷರ ವಿಭಾಗದ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಆದರೆ ಸದ್ಯ ಭಾರತದಲ್ಲಿ ದಿನಕ್ಕೆ ಲಕ್ಷಕ್ಕೂ ಮಿಕ್ಕಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಕದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯುವುದರಲ್ಲಿದೆ.
'ನಮ್ಮಲ್ಲಿ ಟಿ20 ವಿಶ್ವಕಪ್ ಬಗ್ಗೆ ಪ್ಲ್ಯಾನ್ 'ಬಿ' ಇದೆ. ಆದರೆ ಈಗ ನಾವು ಆ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸುತ್ತಿಲ್ಲ. ಈಗಿನವರೆಗೆ ಹಿಂದಿನ ಅದೇ ಪ್ಲ್ಯಾನ್ ನಂತೆ ಟಿ20 ವಿಶ್ವಕಪ್ ನಡೆಯಲಿದೆ. ನಾವು ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ. ಪ್ಲ್ಯಾನ್ ಬಿ ಸಕ್ರಿಯಗೊಳಿಸಲು ಸಂದರ್ಭ ಬಂದರೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ,' ಎಂದು ಅಲ್ಲಾರ್ಡೈಸ್ ತಿಳಿಸಿದ್ದಾರೆ.