
ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಐಪಿಎಲ್ ಬಯೋಬಬಲ್ ಒಳಗೆ ಎರಡು ದಿನಗಳ ಅಂತರದಲ್ಲಿ ನಾಲ್ವರು ಆಟಗಾರರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಹೀಗಾಗಿ ತಕ್ಷಣದಿಂದಲೇ ಐಪಿಎಲ್‌ಅನ್ನು ಬಿಸಿಸಿಐ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿತು. ಈಗ ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಆಟಗಾರರನ್ನು ತವರಿಗೆ ಕಳುಹಿಸುವುದು ಬಿಸಿಸಿಐಗೆ ತಲೆ ನೋವಾಗಿ ಪರಿಣಮಿಸಿದೆ.
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಗೆ ಭಾರತದಿಂದ ಎಲ್ಲಾ ನಾಗರೀಕ ವಿಮಾನಗಳನ್ನು ನಿರ್ಬಂದಿಸಲಾಗಿದೆ. ಜೊತೆಗೆ ಐದು ವರ್ಷಗಳ ಸಜೆಯಂತಾ ಕಠಿಣ ನಿಯಮಗಳನ್ನು ಕೂಡ ತಂದಿದೆ. ಹೀಗಾಗಿ ಆಸಿಸ್ ಆಟಗಾರರು ತವರಿಗೆ ಮರಳುವ ಬಗ್ಗೆ ಚಿಂತಿತರಾಗಿದ್ದಾರೆ. ಇದಕ್ಕೆ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಪ್ರಟಿಕ್ರಿಯಿಸಿದ್ದಾರೆ.
"ನಾವು ಅವರನ್ನು ತವರಿಗೆ ಕಳುಹೊಸಿಕೊಡುವ ಅಗತ್ಯವಿದೆ. ಅದಕ್ಕಾಗಿ ದಾರಿಯನ್ನು ಹುಡುಕುವ ಪ್ರಯತ್ನದಲ್ಲಿ ನಾವಿದ್ದೇವೆ" ಎಂದು ಬ್ರಿಜೇಶ್ ಪಟೇಲ್ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಈ ಬಾರಿಯ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳ ನಂತರ ಮೂವರು ಆಟಗಾರರು ಆಸ್ಟ್ರೇಲಿಯಾಗೆ ಮರಳಿದ್ದರು. ಸ್ಪಿನ್ನರ್ ಆಡಂ ಜಂಪಾ, ವೇಗಿಗಳಾದ ಕೇನ್ ರಿಚರ್ಡ್ಸನ್ ಹಾಗೂ ಆಂಡ್ರೋ ಟೈ ಆಸ್ಟ್ರೇಲಿಯಾಗೆ ವಾಪಾಸಾಗಿದ್ದರು. ಇವರಲ್ಲದೆ ಇನ್ನೂ 14 ಪಂದ್ಯ ಆಟಗಾರರರು ಹಾಗೂ ಸಿಬ್ಬಂದಿಗಳು ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಗಿದ್ದು ಅವರೆಲ್ಲಾ ಸದ್ಯ ಭಾರತದಲ್ಲಿ ಇದ್ದಾರೆ.