
ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್‌ಅಪ್ ಸಾಕಷ್ಟು ಉತ್ಕೃಷ್ಟ ಮಟ್ಟದಲ್ಲಿದೆ. ಹೀಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಆತಿಥೇಯ ತಂಡವನ್ನು ಒತ್ತಡಕ್ಕೆ ಸಿಲುಕಿಸಬೇಕಿದ್ದರೆ ನಿರಂತರವಾಗಿ ಉತ್ತಮವಾದ ಎಸೆತಗಳನ್ನು ಎಸೆಯುತ್ತಿರಬೇಕು ಎಂದು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಗ್ರಹಾಂ ಥಾರ್ಪೆ ಹೇಳಿದ್ದಾರೆ.
2014ರ ಸರಣಿಯಲ್ಲಿ ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನದ ನಂತರ 2016ರಲ್ಲಿ ಹಾಗೂ 2018ರಲ್ಲಿ ನಡೆದ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ಬೌಲಿಂಗ್ ಪಡೆಗೆ ಮತ್ತೊಮ್ಮೆ ಸವಾಲಾಗುವುದರಲ್ಲಿ ಅನುಮಾನವಿಲ್ಲ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕಲಿ ಜೇಮ್ಸ್ ಆಂಡರ್ಸನ್ ನೇತೃಥ್ವದ ಇಂಗ್ಲೆಂಡ್ ಬೌಲಿಂಗ್ ಪಡೆ ವಿಶೇಷವಾದ ಯೋಜನೆ ರೂಪಿಸಿದೆಯಾ ಎಂಬ ಪ್ರಶ್ನೆ ಇಂಗ್ಲೆಂಡ್ ಕೋಚ್ ಗ್ರಹಾಂ ಥಾರ್ಪೆಗೆ ಎದುರಾಯಿತು. ಅದಕ್ಕೆ ಅವರು "ಆತನೋರ್ವ ಅದ್ಭುತವಾದ ಆಟಗಾರ ಎಂಬುದು ನಮಗೆಲ್ಲಾ ತಿಳಿದಿದೆ. ಅದನ್ನು ಆತ ಕಳೆದ ಹಲವಾರು ವರ್ಷಗಳಿಂದ ನಿರೂಪಿಸಿಕೊಂಡು ಬಂದಿದ್ದಾರೆ. ತವರು ವಾತಾವರಣವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ" ಎಂದು ಥಾರ್ಪೆ ಹೇಳಿದರು.
"ನಮ್ಮ ಬೌಲಿಂಗ್ ಪಡೆ ಅತಿ ಮುಖ್ಯವಾಗಿ ನಿರ್ವಹಿಸಬೇಕಿರುವುದು ಏನೆಂದರೆ ಸಾಧ್ಯವಾದಷ್ಟು ನಿರಂತರವಾಗಿ ಉತ್ತಮ ಎಸೆತಗಳನ್ನು ಎಸೆಯುವುದು. ಇದಕ್ಕಿಂತ ಹೆಚ್ಚಿನದಾಗಿ ನಮ್ಮ ವೇಗಿಗಳು ಹಾಗೂ ಸ್ಪಿನ್ನರ್‌ಗಳಿಂದ ನಾನು ಏನನ್ನು ಬಯಸಲಾರೆ. ನಾವು ಉತ್ತಮ ರನ್‌ಗಳನ್ನು ಗಳಿಸಬೇಕು ಹಾಗೂ ಭಾರತದ ಬ್ಯಾಟಿಂಗ್ ಪಡೆಯನ್ನು ಒತ್ತಡಕ್ಕೆ ಸಿಲುಕಿಸಬೇಕು. ಅದು ನಮ್ಮ ಯಶಸ್ಸಿಗೆ ಬಹಳ ಮುಖ್ಯವಾಗಲಿದೆ" ಎಂದು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಬಗ್ಗೆಯೂ ಮಾತನಾಡಿದರು. "ಈಗ ಭಾರತೀಯ ಬೌಲಿಂಗ್ ಪಡೆ ಎಂದರೆ ಕೇವಲ ಸ್ಪಿನ್ ವಿಭಾಗವಾಗಿ ಉಳಿದಿಲ್ಲ. ಭಾರತೀಯ ಬೌಲಿಂಗ್ ಪಡೆ ಈಗ ಅತ್ಯುತ್ತಮ ವೇಗದ ಬೌಲಿಂಗ್ ದಾಳಿಯನ್ನು ಹೊಂದಿದೆ. ನಾವು ಆ ಬಗ್ಗೆಯೂ ಅರಿವು ಹೊಂದಿದ್ದೇವೆ" ಎಂದು ಗ್ರಹಾಂ ಥಾರ್ಪೆ ಪ್ರತಿಕ್ರಿಯಿಸಿದ್ದಾರೆ.