ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ನಂತರ ಭಾರತ ತಂಡವು ಚರ್ಚೆಗೆ ಕಾರಣವಾಗಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಟೀಕೆಗೆ ಗುರಿಯಾಗುತ್ತಿದ್ದಾರೆ. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಇಲ್ಲಿಯವರೆಗೆ ಯಾರೂ ಏನನ್ನೂ ಹೇಳಿರಲಿಲ್ಲ. ಈಗ ಮುಂಬರುವ ಇಂಗ್ಲೆಂಡ್ ಸರಣಿಗೆ ಬುಮ್ಯಾ ಅವರಿಗೆ ವಿಶ್ರಾಂತಿ ನೀಡಬೇಕಾ? ಎಂಬ ಪ್ರಶ್ನೆಗಳನ್ನು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರೊಬ್ಬರು ಎತ್ತಿದ್ದಾರೆ.
ಜಸ್ಪ್ರೀತ್ ಬುಮ್ರಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಅವರು ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 32 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಅವರಿಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಕೂಡ ಸಿಕ್ಕಿತ್ತು.

ಆಸ್ಟ್ರೇಲಿಯಾ ವಿರುದ್ಧ ಜಸ್ಪ್ರೀತ್ ಬುಮ್ರಾ ಆಡಿದ ಐದು ಟೆಸ್ಟ್ ಪಂದ್ಯಗಳಿಂದ ಒಟ್ಟು 150 ಕ್ಕೂ ಹೆಚ್ಚು ಓವರ್‌ಗಳನ್ನು ಬೌಲಿಂಗ್ ಮಾಡಿದ್ದರು. ಪರಿಣಾಮ ಬೆನ್ನು ನೋವಿನ ಸಮಸ್ಯೆಯಿಂದಾಗಿ ಅವರು ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾ ಅವರನ್ನು ಮಿಸ್ ಮಾಡಿಕೊಂಡಿತ್ತು. ಭಾರತ ಸಿಡ್ನಿ ಟೆಸ್ಟ್‌ನಲ್ಲಿ ಸೋಲುವ ಮೂಲಕ ಸರಣಿಯನ್ನು ಉಳಿಸುವಲ್ಲಿ ವಿಫಲವಾಗಿತ್ತು. ಇದೀಗ ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಆಟಗಾರ ಬಲ್ವಿಂದರ್ ಸಂಧು ಬುಮ್ರಾ ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡುವುದು ಅಸಂಬದ್ಧವೆಂದು ಬಣ್ಣಿಸಿದ್ದಾರೆ.
ಟೆಸ್ಟ್ ಇನ್ನಿಂಗ್ಸ್‌ನಲ್ಲಿ 15 ರಿಂದ 20 ಓವರ್‌ಗಳನ್ನು ಬೌಲಿಂಗ್ ಮಾಡುವುದು ವೇಗದ ಬೌಲರ್‌ಗೆ ದೊಡ್ಡ ಸವಾಲಾಗಬಾರದು ಎಂದು ಬಲ್ವಿಂದರ್ ಸಂಧು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಸಂಧು, ಬುಮ್ರಾ ಎಷ್ಟು ಓವರ್ ಬೌಲಿಂಗ್ ಮಾಡಿದರು? 150 ಓವರ್ ಏನೋ, ಸರಿ? ಆದರೆ ಎಷ್ಟು ಪಂದ್ಯಗಳಲ್ಲಿ ಅಥವಾ ಇನ್ನಿಂಗ್ಸ್‌ಗಳಲ್ಲಿ. ಐದು ಪಂದ್ಯಗಳು ಅಥವಾ ಒಂಬತ್ತು ಇನ್ನಿಂಗ್ಸ್, ಸರಿ? ಅಂದರೆ ಪ್ರತಿ ಇನಿಂಗ್ಸ್‌ಗೆ 16 ಓವರ್‌ಗಳಂತೆ ಪ್ರತಿ ಪಂದ್ಯಕ್ಕೆ 30 ಓವರ್‌ಗಳು. ಅವರು ಒಂದು ಸಮಯದಲ್ಲಿ 15 ಓವರ್‌ಗಳಿಗಿಂತ ಹೆಚ್ಚು ಬೌಲಿಂಗ್ ಮಾಡಲಿಲ್ಲ. ಹಾಗಾದರೆ ಇದು ದೊಡ್ಡ ವಿಷಯವೇ? ಕೆಲಸದ ಹೊರೆ ನಿರ್ವಹಣೆ ಕಡಿಮೆ ಮಾಡುವುದು ಅಸಂಬದ್ಧವಾಗಿದೆ ಎಂದು ಹೇಳಿದ್ದಾರೆ.
ಕೆಲಸದ ನಿರ್ವಹಣೆ ಕಡಿಮೆ ಮಾಡಲಿ ವಿಶ್ರಾಂತಿ ನೀಡುವುದನ್ನು ನಾನು ಒಪ್ಪುವುದಿಲ್ಲ. ಒಂದು ದಿನದಲ್ಲಿ 15 ಓವರ್‌ಗಳನ್ನು ಬೌಲಿಂಗ್ ಮಾಡುವುದು ಮತ್ತು ಅದು ಕೂಡ ವಿಭಿನ್ನ ಸ್ಪೆಲ್‌ಗಳಲ್ಲಿ ಬೌಲಿಂಗ್ ಮಾಡುವುದು ಬೌಲರ್‌ಗೆ ದೊಡ್ಡ ವಿಷಯವಲ್ಲ. ಟೆಸ್ಟ್ ಪಂದ್ಯದ ಎಲ್ಲಾ ಐದು ದಿನಗಳಲ್ಲೂ ನೀವು ಬೌಲಿಂಗ್ ಮಾಡುತ್ತಿಲ್ಲ. ಆ ಓವರ್‌ಗಳನ್ನು ಬೌಲಿಂಗ್ ಮಾಡಲು ಅವರು ಮೂರು ಅಥವಾ ನಾಲ್ಕು ಸ್ಪೆಲ್‌ಗಳನ್ನು ತೆಗೆದುಕೊಂಡರು.
ನೀವು ಭಾರತವನ್ನು ಪ್ರತಿನಿಧಿಸಲು ಬಯಸಿದರೆ, ಇನ್ನಿಂಗ್ಸ್‌ನಲ್ಲಿ ಕನಿಷ್ಠ 20 ಓವರ್‌ಗಳನ್ನು ಬೌಲಿಂಗ್ ಮಾಡುವ ಶಕ್ತಿ ನಿಮ್ಮಲ್ಲಿರಬೇಕು. ಅದು ಸಾಧ್ಯವಾಗದಿದ್ದರೆ, ಹಿಂತಿರುಗಿ ಟಿ20 ಆಡುವುದು ಉತ್ತಮ. ಅಲ್ಲಿ ನೀವು ಕೇವಲ ನಾಲ್ಕು ಓವರ್‌ಗಳನ್ನು ಬೌಲಿಂಗ್ ಮಾಡಬೇಕು. ಆ ನಾಲ್ಕು ಓವರ್‌ಗಳನ್ನು ಕೂಡ ಮೂರು ಸ್ಪೆಲ್‌ಗಳಲ್ಲಿ ಬೌಲಿಂಗ್ ಮಾಡಲಾಗುತ್ತದೆ ಎಂದು ಬಲ್ವಿಂದರ್ ಸಂಧು ವ್ಯಂಗ್ಯವಾಡಿದ್ದಾರೆ.