ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ರ ಮೆಗಾ ಹರಾಜಿಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ನಿಯಮಗಳನ್ನು ಪ್ರಕಟಿಸಿದೆ. ಎಲ್ಲಾ ಹತ್ತು ತಂಡಗಳು ಅಕ್ಟೋಬರ್ 31 ರೊಳಗೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಬಿಸಿಸಿಐ ಗಡುವು ನೀಡಿದೆ.
ಬಿಸಿಸಿಐ ಘೋಷಣೆಯ ನಿರ್ಧಾರಗಳ ಒಂದು ಭಾಗವು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಫ್ರಾಂಚೈಸಿ ಬಹಳ ಮುಖ್ಯವಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಹಳೆಯ ನಿಯಮವನ್ನು ಮತ್ತೆ ಜಾರಿಗೆ ತಂದಿದೆ. ಇದರಿಂದ ಸಿಎಸ್‌ಕೆ ತಂಡ ಲಾಭ ಪಡೆಯುವ ಸಾಧ್ಯತೆಯಿದೆ.

ನಿಯಮಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತಕ್ಕಾಗಿ ಆಡದ ಯಾವುದೇ ಕ್ರಿಕೆಟಿಗನನ್ನು 'ಅನ್‌ಕ್ಯಾಪ್ಡ್' ಎಂದು ಪರಿಗಣಿಸಲಾಗುತ್ತದೆ. ಈ ಆಟಗಾರನ ಬೆಲೆ ಕಡಿಮೆಯಾಗಲಿದ್ದು, ಫ್ರಾಂಚೈಸ್ ಹಣವನ್ನು ಉಳಿಸಿಕೊಳ್ಳಬಹುದಾಗಿದೆ. ಈ ನಿಯಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೂ ಅನ್ವಯಿಸಿದೆ. ಅವರು 2020ರ ಆಗಸ್ಟ್ 15 ರಂದು ಎಲ್ಲಾ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು 2019 ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಪ್ರತಿ ತಂಡವೂ ಒಬ್ಬ ಅನ್‌ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳುವುದನ್ನು ಬಿಸಿಸಿಐ ಕಡ್ಡಾಯ ಮಾಡಿದೆ. ಈ ನಿಯಮವನ್ನು ಬಳಸಿಕೊಂಡು ಸಿಎಸ್‌ಕೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ಗಳಿಗೆ ಧೋನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಧೋನಿ ಈಗ ಹೆಚ್ಚೆಂದರೆ ಇನ್ನೂ ಒಂದು ಋತುವಿನಲ್ಲಿ ಆಡಬಹುದು. ಇಂತಹ ಪರಿಸ್ಥಿತಿಯಲ್ಲಿ ಅವರ ಮೇಲೆ ಫ್ರಾಂಚೈಸಿ ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸುವುದಿಲ್ಲ.
ಮತ್ತೊಂದೆಡೆ ಈ ನಿಯಮ ಮರು ಜಾರಿಯಾದ ನಂತರ ಮುಂದಿನ ವರ್ಷ ಧೋನಿ ಮತ್ತೆ ಐಪಿಎಲ್ ಆಡುತ್ತಾರೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ. ಆದರೆ, ಸಿಎಸ್ ಕೆ ಸಿಇಒ ಕಾಸಿ ವಿಶ್ವನಾಥನ್ ನೀಡಿದ ಹೇಳಿಕೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಸಿಎಸ್‌ಕೆ ಸಿಇಒ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, ಬಿಸಿಸಿಐ ಹೊಸ ನಿಯಮವನ್ನು ಎಂಎಸ್ ಧೋನಿಗಾಗಿ ಬಳಸಲು ಸಾಧ್ಯವಿಲ್ಲ. ಈ ಬಗ್ಗೆ ನಾವು ಅವರೊಂದಿಗೆ ಚರ್ಚಿಸಿಲ್ಲ. ಸದ್ಯ ಧೋನಿ ಅವರು ಅಮೆರಿಕದಲ್ಲಿದ್ದು, ನಾನು ಈ ವಾರ ಪ್ರಯಾಣ ಮಾಡುತ್ತಿದ್ದೇನೆ. ಆದ್ದರಿಂದ ಮುಂದಿನ ವಾರದಲ್ಲಿ ಸ್ವಲ್ಪ ಚರ್ಚೆಯಾಗುವ ಸಾಧ್ಯತೆಯಿದೆ. ಇದಾದ ನಂತರ ಬಿಸಿಸಿಐ ನಿಯಮ ಬಳಸುವ ನಿರ್ಧಾರದ ಬಗ್ಗೆ ಸ್ವಲ್ಪ ಸ್ಪಷ್ಟತೆ ಸಿಗಬಹುದು. ಧೋನಿ ಮುಂದಿನ ವರ್ಷ ಐಪಿಎಲ್ ಆಡುತ್ತಾರೆ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ಆಡುವ ನಿರ್ಧಾರ ಧೋನಿ ಅವರದ್ದೇ ಎಂದು ತಿಳಿಸಿದ್ದಾರೆ.