ಜುಲೈ 22 ಸೋಮವಾರ, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಹೆಡ್ ಕೋಚ್ ಆದ ನಂತರ ಗೌತಮ್ ಗಂಭೀರ್ ಅವರ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.
ಪತ್ರಿಕಾಗೋಷ್ಠಿ ಗೌತಮ್ ಗಂಭೀರ್ ಮನ ಬಿಚ್ಚಿ ಮಾತನಾಡಿದ್ದು, ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಗೌತಮ್ ಗಂಭೀರ್ ಈ ಹಿಂದೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ನಂತರದ ಸಂಬಂಧದ ಬಗ್ಗೆ ಮಾತನಾಡಿದರು. ಈ ವೇಳೆ ಗಂಭೀರ್ ತಮ್ಮ ಒಂದು ಹೇಳಿಕೆಯ ಮೂಲಕ ಸಂಚಲನ ಮೂಡಿಸಿದರು.

ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧ ಸರಿಯಿಲ್ಲ ಎಂಬುದು ಎಲ್ಲರಿಗೂ ತಿಳಿದರುವ ವಿಚಾರ. ಐಪಿಎಲ್‌ನಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿ ಆದಾಗ ಸಾಕಷ್ಟು ಬಾರಿ ಜಗಳವಾಡಿದ್ದಾರೆ.
ಇದರ ಹೊರತಾಗಿಯೂ ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ಹೇಳಿರುವುದು ಸಂಚಲನ ಮೂಡಿಸಿದೆ. ರನ್ ಮಷಿನ್ ಜೊತೆಗಿನ ಸಂಬಂಧದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, 'ವಿರಾಟ್ ಕೊಹ್ಲಿ ಜತೆಗಿನ ನನ್ನ ಸಂಬಂಧ ನಮ್ಮಿಬ್ಬರ ನಡುವಿನದ್ದು, ಟಿಆರ್‌ಪಿಗಾಗಿ ಅಲ್ಲ ಎಂದು ಹೇಳಿದ್ದಾರೆ.
"ನಾವು 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೇವೆ. ಕೊಹ್ಲಿ ಜೊತೆ ಮೈದಾನದ ಹೊರಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇನೆ. ಇದು ಸಾರ್ವಜನಿಕರಿಗಾಗಿ ಅಲ್ಲ.
ಆಟದ ಸಮಯದಲ್ಲಿ ಅಥವಾ ನಂತರ ನಾನು ಅವನೊಂದಿಗೆ ಎಷ್ಟು ಚಾಟ್ ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಕೊಹ್ಲಿ ಸಂಪೂರ್ಣ ವೃತ್ತಿಪರ, ವಿಶ್ವ ದರ್ಜೆಯ ಕ್ರೀಡಾಪಟು" ಎಂದು ಹೇಳುವ ಮೂಲಕ ರನ್ ಮಷಿನ್ ಜೊತೆಗಿನ ಸಂಬಂಧದ ಬಗ್ಗೆ ಗಂಭೀರ್ ಮೌನ ಮುರಿದಿದ್ದಾರೆ.
ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗಂಭೀರ್ ನೇಮಕವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಕೂಡ ಈ ಬಗ್ಗೆ ಬಿಸಿಸಿಐಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಗಂಭೀರ್ ಮತ್ತು ನನ್ನ ನಡುವೆ ಈ ಮೊದಲು ಏನೇ ಆಗಿದ್ದರೂ, ಭಾರತ ತಂಡಕ್ಕೆ ಆಡುವಾಗ ಇಬ್ಬರ ಉದ್ದೇಶ ಒಂದೇ ಆಗಿದೆ. ಭಾರತ ತಂಡದ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.