ಆಗಸ್ಟ್ 19 ಸೋಮವಾರ, ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಆಟಕ್ಕೆ ಬ್ರೇಕ್ ಹಾಕಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಭಾರತ ತಂಡವು ಶ್ರೀಲಂಕಾ ಪ್ರವಾಸದ ನಂತರ ವಿರಾಮ ತೆಗೆಕೊಂಡಿದೆ. ಸೆಪ್ಟೆಂಬರ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಟೆಸ್ಟ್ ಸರಣಿಯಲ್ಲಿ ಎದುರಿಸಲಿದೆ.
ಆದರೆ ಅದಕ್ಕೂ ಮುನ್ನ ದೇಶಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಕೆಲ ಆಟಗಾರರು ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಟೂರ್ನಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದೆ. ಆದರೆ ಯುವ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಯಾವುದೇ ತಂಡದಲ್ಲಿ ಸ್ಥಾನ ಪಡೆದಿಲ್ಲ.

2023ರ ಋತುವನ್ನು ರಿಂಕು ಸಿಂಗ್ ಅದ್ಭುತವಾಗಿ ಆರಂಭಿಸಿದ್ದರು. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸುದ್ದಿಯಾಗಿದ್ದರು. ಇದಾದ ನಂತರ, ಅವರು ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ರಿಂಕು ಸಿಂಗ್ ತಮ್ಮ ಬ್ಯಾಟಿಂಗ್ ಖದರ್ ತೋರಿ ಸೈ ಎನಿಸಿಕೊಂಡರು.
ಆದರೆ 2024ರ ಆರಂಭವು ರಿಂಕು ಸಿಂಗ್ ನಿರೀಕ್ಷೆಯಂತೆ ನಡೆಯಲಿಲ್ಲ. ಐಪಿಎಲ್‌ನಲ್ಲಿಯೂ ಸಹ ರಿಂಕು ಸಿಂಗ್‌ಗೆ ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಟಿ20 ವಿಶ್ವಕಪ್ ಭಾರತ ತಂಡದ ಟಾಪ್-15 ರೊಳಗೆ ಅವಕಾಶ ಸಿಕ್ಕಿರಲಿಲ್ಲ.
ಬಳಿಕ ರಿಂಕು ಜಿಂಬಾಬ್ವೆ ಪ್ರವಾಸದಲ್ಲಿ ಸರಾಸರಿ ಪ್ರದರ್ಶನದ ನೀಡಿದರೆ, ಶ್ರೀಲಂಕಾದಲ್ಲಿ ಕಳಪೆ ಆಟವಾಡಿದರು. ಇದೀಗ ಸೆಪ್ಟಂಬರ್ 5 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಅವರು ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
ಈ ಕುರಿತು ಮಾಧ್ಯಮವೊಂದರ ಜೊತೆಗೆ ರಿಂಕು ಸಿಂಗ್ ಮಾತನಾಡಿದ್ದಾರೆ. "ನಾನು (ದೇಶೀಯ ಋತುವಿನಲ್ಲಿ) ಉತ್ತಮ ಪ್ರದರ್ಶನ ನೀಡಲಿಲ್ಲ. ರಣಜಿ ಟ್ರೋಫಿಯಲ್ಲಿ ಕೇವಲ 2 ರಿಂದ 3 ಪಂದ್ಯಗಳನ್ನು ಆಡಿದ್ದೇನೆ. ನಾನು ಉತ್ತಮ ಪ್ರದರ್ಶನ ನೀಡದ ಕಾರಣ ಆಯ್ಕೆ ಮಾಡಲಿಲ್ಲ" ಎಂದು ಬೇಸರಗೊಂಡಿದ್ದಾರೆ.
"ನನಗೆ ಸಿಗುತ್ತಿರುವ ಅವಕಾಶಗಳಿಂದ ನಾನು ಸಂತೋಷವಾಗಿದ್ದೇನೆ. ನಾನು ಏಕದಿನ ಅಥವಾ ಟೆಸ್ಟ್‌ಗೆ ಆಯ್ಕೆಯಾದಾಗ, ಅದು ನನಗೆ ದೊಡ್ಡ ವಿಷಯವಾಗಿರುತ್ತದೆ. ನಾನು ಈಗ ಏನು ಆಡುತ್ತಿದ್ದೇನೆ, ಅದನ್ನು ಮುಂದುವರೆಸುತ್ತೇನೆ" ಎಂದು ಮುಂಬರುವ ದಿನಗಳಲ್ಲಿ ಏಕದಿನ ಅಥವಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
2023-24ರ ರಣಜಿ ಟ್ರೋಫಿ ಋತುವಿನಲ್ಲಿ ರಿಂಕು ಸಿಂಗ್, ಉತ್ತರ ಪ್ರದೇಶ ಪರ ಮೂರು ಪಂದ್ಯಗಳನ್ನು ಆಡಿದ್ದರು. ಈ ಸಂದರ್ಭದಲ್ಲಿ ಅವರು ಒಂದು ಅರ್ಧ ಶತಕ ಸೇರಿದಂತೆ 42.66 ರ ಸರಾಸರಿಯಲ್ಲಿ 128 ರನ್ ಗಳಿಸಿದ್ದರು.