ಐದು ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2025 ರಲ್ಲಿ ಏರಿಳಿತಗಳನ್ನು ಎದುರಿಸುತ್ತಿದೆ. ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಯಿತು. ಇದಾದ ನಂತರ ತಂಡದ ಗ್ರಾಫ್ ಕುಸಿಯುತ್ತಿರುವಂತೆ ಕಾಣಿಸುತ್ತಿದೆ. ಐಪಿಎಲ್ 2025 ರಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿರುವ ಮೂರ ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಸೋತರೆ, ತವರಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದೆ.
ಐಪಿಎಲ್ 2025 ರಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಮಂಕಾಗಿದ್ದು, ಸತತ ಬ್ಯಾಟಿಂಗ್ ವೈಫ್ಯಲ ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ತಮ್ಮ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ತಮ್ಮ ವೃತ್ತಿಜೀವನ ಹೇಗೆ ಬದಲಾಯಿತು ಎಂದು ಹೇಳಿದ್ದಾರೆ. ಇದಲ್ಲದೆ, ಅವರು ತಂಡದ ಸಹಾ ಆಟಗಾರರನ್ನು ಹೊಗಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರೋಹಿತ್ ಶರ್ಮಾ, ನಾನು ಮೊದಲು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ, ಈಗ ನಾನು ಇನ್ನಿಂಗ್ಸ್ ಆರಂಭಿಸುತ್ತಿದ್ದೇನೆ. ನಾನು ನಾಯಕನಾಗಿದ್ದೆ, ಈಗ ಇಲ್ಲ. ನಮ್ಮ ಚಾಂಪಿಯನ್ ಸೀಸನ್‌ಗಳಲ್ಲಿ ನನ್ನ ತಂಡದಲ್ಲಿದ್ದ ಕೆಲವು ಅಟಗಾರರು ಈಗ ಕೋಚಿಂಗ್ ಸ್ಟಾಫ್‌ನಲ್ಲಿದ್ದಾರೆ. ಹಾಗಾಗಿ, ಪಾತ್ರಗಳು ಬದಲಾಗಿವೆ, ಬಹಳಷ್ಟು ಬದಲಾಗಿವೆ. ಆದರೆ ಮನಸ್ಥಿತಿ ಒಂದೇ ಆಗಿರುತ್ತದೆ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ನಾನು ಏನು ಮಾಡಬೇಕೆಂದಿದ್ದೇನೆ ಎಂಬುದು ಬದಲಾಗಿಲ್ಲ. ಅದು ಹೊರಗೆ ಹೋಗಿ ಪಂದ್ಯಗಳು ಮತ್ತು ಟ್ರೋಫಿಗಳನ್ನು ಗೆಲ್ಲುವುದಾಗಿರಬಹುದು. ಮುಂಬೈ ಇಂಡಿಯನ್ಸ್ ತಂಡ ಇದೇ ಕಾರಣಕ್ಕೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಿಂದ, ನಾವು ಟ್ರೋಫಿಗಳನ್ನು ಗೆದ್ದಿದ್ದೇವೆ. ಯಾರೂ ನಂಬದ ಪರಿಸ್ಥಿತಿಯಿಂದ ಆಟವನ್ನು ಬದಲಾಯಿಸಿದ್ದೇವೆ. ಇದು ಮುಂಬೈ ತಂಡ ವಿಶೇಷತೆ ಎಂದು ತಮ್ಮ ತಂಡವನ್ನು ಹೊಗಳಿದ್ದಾರೆ.
ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡದ ವಿಶೇಷತೆಯನ್ನು ವಿವರಿಸಿದ ರೋಹಿತ್, ಟ್ರೆಂಟ್ ಬೌಲ್ಟ್ ಅವರಂತಹ ಆಟಗಾರರು ಇಲ್ಲಿಗೆ ಈ ಹಿಂದೆ ಬಂದಿದ್ದು, ಸಾಕಷ್ಟು ಅನುಭವವನ್ನು ತರುತ್ತಾರೆ. ಮುಂಬೈನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಇದ್ದಾರೆ. ವಿಲ್ ಜ್ಯಾಕ್ಸ್ ಮತ್ತು ರೀಸ್ ಟಾಪ್ಲಿಯಂತಹ ಆಟಗಾರರು ವೈವಿಧ್ಯತೆಯನ್ನು ತರುತ್ತಾರೆ. ಆದರೆ ರಯಾನ್ ರಿಕಲ್ಟನ್ ಒಬ್ಬ ಅದ್ಭುತ ಯುವ ಆಟಗಾರ. ಈ ಆಟಗಾರರಲ್ಲಿ ಪ್ರತಿಯೊಬ್ಬರೂ ತಂಡಕ್ಕೆ ವಿಭಿನ್ನವಾದದ್ದನ್ನು ಸೇರಿಸುತ್ತಾರೆ. ಇದು ದೊಡ್ಡ ಪರಿಣಾಮ ಬೀರುತ್ತದೆ. ನಮ್ಮಲ್ಲಿ ಸಾಕಷ್ಟು ಸಾಮರ್ಥ್ಯವಿರುವ ಅನೇಕ ಯುವ ಭಾರತೀಯ ಆಟಗಾರರಿದ್ದಾರೆ. ನಾನು ಅವರೊಂದಿಗೆ ಆಡಲು ಎದುರು ನೋಡುತ್ತಿದ್ದೇನೆ. ನನ್ನ ಗುರಿ ಟಾಟಾ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದು ಎಂದು ರೋಹಿತ್ ಶರ್ಮಾ ನುಡಿದಿದ್ದಾರೆ.