ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ನಂತರ ಭಾರತ ಟೀಕೆಗಳನ್ನು ಎದುರಿಸುವಂತಾಗಿದೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಿರಾಶಾದಾಯಕ ಸೋಲನ್ನು ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತ ಎಂದು ಬಣ್ಣಿಸಿದ್ದಾರೆ. ಟೆಸ್ಟ್ ಸರಣಿಯ ಸೋಲಿನ ಸಂಪೂರ್ಣ ಹೊಣೆಯನ್ನು ರೋಹಿತ್ ಶರ್ಮಾ ಹೊತ್ತುಕೊಂಡಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತ 25 ರನ್‌ಗಳಿಂದ ಸೋತಿತು. ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ 3-0 ಹೀನಾಯ ಸೋಲನ್ನು ಅನುಭವಿಸಿತು. 147 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡ 121 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಸೋಲಿನ ನಂತರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ವಾಂಖೆಡೆ ಟೆಸ್ಟ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, 'ಈ ರೀತಿಯ ಪ್ರದರ್ಶನವು ನನ್ನ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವಾಗಿದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ತವರು ನೆಲದಲ್ಲಿ ಈ ರೀತಿಯ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳುವುದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಈಗ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಾಗಿದೆ. ಭಾರತ ಕೊನೆಯ ಎರಡು ಪ್ರವಾಸಗಳಲ್ಲಿ ಗೆದ್ದಿದೆ. ಆಸ್ಟ್ರೇಲಿಯಾದಲ್ಲಿ ಯುವ ಬ್ಯಾಟರ್‌ಗಳಿಗೆ ಸವಾಲಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡದಿದ್ದರೆ ಅದು ಕಳವಳಕಾರಿ ಸಂಗತಿ. ಆಟಗಾರನಾಗಿ, ನಾಯಕನಾಗಿ, ತಂಡವಾಗಿ ನಾವೆಲ್ಲರೂ ಮುಂದೆ ನೋಡಬೇಕು. ತವರಿನಲ್ಲಿ ಸಾಧಿಸಲಾಗದಿದ್ದನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೋಡಬೇಕು. ಆಸ್ಟ್ರೇಲಿಯಾಕ್ಕೆ ಹೋಗಿ ವಿಶೇಷವಾದುದನ್ನು ಮಾಡಲು ನಮಗೆ ಉತ್ತಮ ಅವಕಾಶವಿದೆ. ನಾವು ಈ ಬಗ್ಗೆ ಗಮನ ಹರಿಸುತ್ತೇವೆ ಎಂದು ರೋಹಿತ್ ಶರ್ಮಾ ಭರವಸೆ ವ್ಯಕ್ತಪಡಿಸಿದ್ದಾರೆ.
ನಮ್ಮ ಹಲವು ಆಟಗಾರರು ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಆಡಿದ್ದಾರೆ. ಆದರೆ ತಂಡದಲ್ಲಿರುವ ಕೆಲವು ಆಟಗಾರರು ಈ ಮೊದಲು ಅಲ್ಲಿ ಆಡಿಲ್ಲ. ಆದ್ದರಿಂದ ನಾವು ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಮುಂಚಿತವಾಗಿ ಅಲ್ಲಿಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವುದು ಸುಲಭವಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ಭಾರತ ಕಳೆದ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ನಾವು ನೀಡಿದ ಪ್ರದರ್ಶನದ ರೀತಿಯಿಂದ ಸಾಕಷ್ಟು ಆತ್ಮವಿಶ್ವಾಸವನ್ನು ಗಳಿಸಬಹುದು. ಹೀಗೆ ನಮ್ಮ ಮನಸ್ಸಿನಲ್ಲಿ ಯೋಚಿಸಬೇಕು ಎಂದು ರೋಹಿತ್ ಶರ್ಮಾ ಅವರು ಸಹಾ ಆಟಗಾರರಿಗೆ ಸಲಹೆ ನೀಡಿದ್ದಾರೆ.
ಕೋಚಿಂಗ್ ಸಿಬ್ಬಂದಿ ಚೆನ್ನಾಗಿದ್ದಾರೆ. ಅವರು ಈಗಷ್ಟೇ ಬಂದಿದ್ದಾರೆ. ಆಟಗಾರರು ಮತ್ತು ತಂಡಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅವರು ಇನ್ನೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ವಿಷಯಗಳನ್ನು ಸುಲಭಗೊಳಿಸುವುದು ಆಟಗಾರರ ಜವಾಬ್ದಾರಿಯಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.