ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್ ಇಕ್ಬಾಲ್ ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದರು. ನಂತರ ಅವರು ಈಗ ಅಪಾಯದಿಂದ ಪಾರಾಗಿದ್ದಾರೆ. ಸೋಮವಾರ ಢಾಕಾ ಪ್ರೀಮಿಯರ್ ಡಿವಿಷನ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಬಳಿಕ ತಮೀಮ್ ಇಕ್ಬಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹೃದಯದ ಅಪಧಮನಿಯಲ್ಲಿ ಅಡಚಣೆ ಉಂಟಾಗಿ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
ಸದ್ಯ ಈಗ ಆಸ್ಪತ್ರೆಯಿಂದ ತಮೀಮ್ ಇಕ್ಬಾಲ್ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾತನಾಡಿರುವ ತಮೀಮ್ ಇಕ್ಬಾಲ್ ಅವರು ತಮ್ಮ ಅಭಿಮಾನಿಗಳ ಪ್ರೀತಿಗೆ ತಲೆ ಬಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತಮ್ಮ ಅಭಿಮಾನಿಗಳು ತೋರಿಸುತ್ತಿರುವ ಅಪಾರ ಪ್ರೀತಿಯಿಂದ ತುಂಬಿಹೋಗಿದ್ದೇನೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ತಮೀಮ್ ಇಕ್ಬಾಲ್, ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು. ನಾನು ಈಗ ಮನೆಯಲ್ಲಿದ್ದೇನೆ. ಈ ನಾಲ್ಕು ದಿನಗಳಲ್ಲಿ, ನನ್ನ ಸುತ್ತಮುತ್ತಲಿನ ಪ್ರದೇಶಗಳನ್ನು ತಿಳಿದುಕೊಂಡಿದ್ದೇನೆ. ನನಗೆ ಹೊಸ ಜೀವನ ಸಿಕ್ಕಿದೆ. ಈ ಭಾವನೆಯಲ್ಲಿ ಪ್ರೀತಿ ಮತ್ತು ಕೃತಜ್ಞತೆ ಮಾತ್ರ ಇದೆ. ನನ್ನ ವೃತ್ತಿಜೀವನದುದ್ದಕ್ಕೂ ನಿಮ್ಮ ಪ್ರೀತಿಯನ್ನು ಪಡೆದಿದ್ದೇನೆ. ಆದರೆ ಈಗ ನಾನು ಅದನ್ನು ಇನ್ನಷ್ಟು ತೀವ್ರವಾಗಿ ಅನುಭವಿಸುತ್ತಿದ್ದೇನೆ. ನಾನು ತುಂಬಾ ಭಾವುಕನಾಗಿದ್ದೇನೆ ಎಂದು ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.
ವೈದ್ಯರು, ಸಹಾಯಕ ಸಿಬ್ಬಂದಿ ಮತ್ತು ವಿಶೇಷವಾಗಿ ಕೋಚ್ ಯಾಕುಬ್ ಚೌಧರಿ ದಲೀಮ್ ಅವರಿಗೆ ತಮೀಮ್ ಕೃತಜ್ಞತೆ ಸಲ್ಲಿಸಿದ್ದಾರೆ. ನಮ್ಮ ಕೋಚ್ ಯಾಕುಬ್ ಚೌಧರಿ ದಲೀಮ್ ಭಾಯ್ ಅವರಿಗೆ ಹೇಗೆ ಧನ್ಯವಾದ ಹೇಳಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ ಇದೇ ವೇಳೆ ತಮೀಮ್ ಹೇಳಿದ್ದಾರೆ. ದಲೀಮ್ ಭಾಯ್ ಆ ಸಮಯದಲ್ಲಿ ಸರಿಯಾಗಿ ಸಿಪಿಆರ್ ನೀಡದಿದ್ದರೆ, ನಾನು ಬದುಕುಳಿಯುತ್ತಿರಲಿಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆಂದು ನಂತರ ನನಗೆ ತಿಳಿಯಿತು. ಪೂರ್ಣ ಚೇತರಿಕೆಯ ಹಾದಿ ಇನ್ನೂ ದೂರದಲ್ಲಿದೆ. ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿಮ್ಮ ಪ್ರಾರ್ಥನೆಯಲ್ಲಿ ಇರಿಸಿ. ಎಲ್ಲರ ಜೀವನವು ಸುಂದರ ಮತ್ತು ಶಾಂತಿಯುತವಾಗಿರಲಿ. ಎಲ್ಲರ ಮೇಲೂ ಪ್ರೀತಿ ಇದೆ ಎಂದಿದ್ದಾರೆ.
ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್‌ನಲ್ಲಿ ಶಿನೆಪುಕುರ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ತಮೀಮ್ ಇಕ್ಬಾಲ್ ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಅನ್ನು ಮುನ್ನಡೆಸುತ್ತಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಈ ವರ್ಷದ ಜನವರಿಯಲ್ಲಿ ತಮೀಮ್ ಎರಡನೇ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಜುಲೈ 2023 ರಲ್ಲಿ ತಮೀಮ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಘೋಷಣೆ ಮಾಡಿದ್ದರು. ಆದರೆ ಆಗಿನ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಮಧ್ಯಸ್ಥಿಕೆಯ ನಂತರ 24 ಗಂಟೆಗಳ ಒಳಗೆ ತಮ್ಮ ನಿರ್ಧಾರವನ್ನು ಬದಲಾಯಿಸಿದರು. 2023 ರಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಆಡಿದ ತಮೀಮ್, ಬಾಂಗ್ಲಾದೇಶ ಪರ 70 ಟೆಸ್ಟ್ ಮತ್ತು 243 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಇದರಲ್ಲಿ ಅವರು ಕ್ರಮವಾಗಿ 5134 ಮತ್ತು 8357 ರನ್ ಗಳಿಸಿದ್ದಾರೆ. ಅವರು 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1758 ರನ್ ಬಾರಿಸಿದ್ದಾರೆ.