ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆಸ್ಪತ್ರೆಗೆ ದಾಖಲಾದ ಸುದ್ದಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಇದ್ದಕ್ಕಿದ್ದಂತೆ ವಿನೋದ್ ಕಾಂಬ್ಳಿ ಪ್ರಜ್ಞೆ ತಪ್ಪಿದ್ದು, ಥಾಣೆ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ವರದಿಗಳ ನಂತರ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಬೆಳಕಿಗೆ ಬಂದಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಹಿತಿ ನೀಡಿದ್ದಾರೆ. ವಿನೋದ್ ಕಾಂಬ್ಳಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ವಿವೇಕ್ ತ್ರಿವೇದಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿನೋದ್ ಕಾಂಬ್ಳಿ ಅವರು ಆರಂಭದಲ್ಲಿ ಮೂತ್ರದ ಸೋಂಕು ಮತ್ತು ಸೆಳೆತದ ಬಗ್ಗೆ ದೂರು ನೀಡಿದ್ದರು. ನಂತರ ಅವರನ್ನು ಶನಿವಾರ ಭಿವಂಡಿ ನಗರದ ಕಲ್ಹೇರ್ ಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೃತಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯಕೀಯ ತಂಡವು ಹಲವಾರು ಪರೀಕ್ಷೆಗಳ ನಂತರ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಪತ್ತೆ ಹಚ್ಚಿದೆ ಎಂದು ತ್ರಿವೇದಿ ಹೇಳಿದ್ದಾರೆ.

ವಿನೋದ್ ಕಾಂಬ್ಳಿ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಡಲಾಗಿದೆ. ವೈದ್ಯರ ತಂಡ ಮಂಗಳವಾರ ಹೆಚ್ಚುವರಿ ವೈದ್ಯಕೀಯ ಪರೀಕ್ಷೆ ನಡೆಸಲಿದೆ. ಆಸ್ಪತ್ರೆಯ ಉಸ್ತುವಾರಿ ಎಸ್ ಸಿಂಗ್ ಅವರು ಕಾಂಬ್ಳಿ ಅವರಿಗೆ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ. ಕಾಂಬ್ಳಿ ಅವರು ದೀರ್ಘಕಾಲದವರೆಗೆ ಮದ್ಯಪಾನ ಸೇವನೆ ಮಾಡಿರುವುದರಿಂದ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ ಎಂದು ತ್ರಿವೇದಿ ತಿಳಿಸಿದ್ದಾರೆ.
ಇತ್ತೀಚೆಗೆ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮರಣಾರ್ಥ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ವಿನೋದ್ ಕಾಂಬ್ಳಿ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಕಾಂಬ್ಳಿ ತುಂಬಾ ದುರ್ಬಲವಾಗಿ ಕಾಣುತ್ತಿದ್ದರು. ಅವರ ಮಾನಸಿಕ ಸ್ಥಿತಿಯೂ ಚೆನ್ನಾಗಿರಲಿಲ್ಲ. ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ನಂತರ ಕಾಂಬ್ಳಿ ಭಾವುಕರಾಗಿದ್ದರು. ಇಬ್ಬರೂ ದಿಗ್ಗಜರು ಅಚ್ರೇಕರ್ ಅವರ ತರಬೇತಿಯಲ್ಲಿ ಹಲವು ವರ್ಷಗಳ ಕಾಲ ಒಟ್ಟಿಗೆ ಆಡಿದ್ದರು.
ಭಾರತ ತಂಡದ ಪರ ವಿನೋದ್ ಕಾಂಬ್ಳಿ 1991ರಲ್ಲಿ ಪದಾರ್ಪಣೆ ಮಾಡಿದರು. ಭಾರತದ ಪರ 17 ಟೆಸ್ಟ್ ಪಂದ್ಯಗಳಲ್ಲಿ 1084 ರನ್ ಸಿಡಿಸಿರುವ ಕಾಂಬ್ಳಿ 4 ಶತಕ, 3 ಅರ್ಧ ಶತಕಗಳನ್ನು ಹೊಂದಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 104 ಪಂದ್ಯಗಳನ್ನು ಆಡಿದ್ದು, 2477 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 14 ಅರ್ಧಶತಗಳು ಸೇರಿವೆ. 2000ರಲ್ಲಿ ಕಳಪೆ ಪ್ರದರ್ಶನದ ಆಧಾರದ ಮೇಲೆ ಅವರನ್ನು ತಂಡದಿಂದ ಕೈ ಬಿಡಲಾಯಿತು. 2000 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೊನೆ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ