ಆಗಸ್ಟ್ 13 ಮಂಗಳವಾರ, ಅನುಭವಿ ವಿಕೆಟ್‌ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಯುವ ಆಟಗಾರ ಅದ್ಭುತ ಪ್ರದರ್ಶನದಿಂದಾಗಿ ವೃದ್ಧಿಮಾನ್ ಸಹಾ ತನ್ನ ಸ್ಥಾನವನ್ನು ಟೀಮ್ ಇಂಡಿಯಾದಲ್ಲಿ ಕಳೆದುಕೊಳ್ಳವಂತಾಗಿದೆ.
ಇದೀಗ ದೇಶೀಯ ಟೂರ್ನಿಯಲ್ಲಿ ಅಬ್ಬರಿಸಲು ವೃದ್ದಿಮಾನ್ ಸಹಾ ರೆಡಿಯಾಗಿದ್ದಾರೆ. ಇದಕ್ಕಾಗಿ ತ್ರಿಪುರಾ ಜೊತೆ ಎರಡು ಸೀಸನ್‌ಗಳನ್ನು ಆಡಿದ ನಂತರ ಬಂಗಾಳ ಪರ ಕಣಕ್ಕೀಳಿಯುತ್ತಿರುವ ಬಗ್ಗೆ ವೃದ್ದಿಮಾನ್ ಹೇಳಿದ್ದಾರೆ. ಮುಂಬರುವ ದೇಶೀಯ ಋತುವಿನಲ್ಲಿ ರಾಜ್ಯಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುವ ಕುರಿತು ಕೂಡ ತಿಳಿಸಿದ್ದಾರೆ.

ಸೋಮವಾರ ಈಡನ್ ಗಾರ್ಡನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೃದ್ಧಿಮಾನ್, 'ಬಂಗಾಳಕ್ಕೆ ಮರಳಲು ನಾನು ಉತ್ಸುಕನಾಗಿದ್ದೇನೆ. ರಾಜ್ಯಕ್ಕಾಗಿ ಆಡುವ ಮೂಲಕ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ. ಅಲ್ಲದೆ, ಈಗ ಬಂಗಾಳ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ಯೋಜಿಸುತ್ತಿದ್ದೇನೆ ಎಂದಿದ್ದಾರೆ.
ವೃದ್ದಿಮಾನ್ ವಯಸ್ಸು ಮತ್ತು ನಿವೃತ್ತಿಯ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, 'ವಯಸ್ಸು ನನಗೆ ಕೇವಲ ಒಂದು ಸಂಖ್ಯೆ. ಎಲ್ಲಿಯವರೆಗೆ ನಾನು ಈ ಆಟವನ್ನು ಆಡಲು ಪ್ರೇರೇಪಿಸುತ್ತೇನೋ ಅಲ್ಲಿಯವರೆಗೆ ಆಡುವುದನ್ನು ಮುಂದುವರಿಸುತ್ತೇನೆ. ಸದ್ಯಕ್ಕೆ ನಿವೃತ್ತಿಯ ಬಗ್ಗೆ ನನ್ನಲ್ಲಿ ಯಾವುದೇ ಯೋಜನೆ ಇಲ್ಲ. ಯಾವಾಗ ಆಟವನ್ನು ತೊರೆಯಬೇಕು ಎಂಬುದನ್ನು ಯೋಚಿಸಿ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುತ್ತೇನೆ ಎಂದು ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರುವ ಭರವಸೆಯ ವಿಕೆಟ್‌ಕೀಪರ್-ಬ್ಯಾಟರ್ ಅಭಿಷೇಕ್ ಪೊರೆಲ್ ಅವರೊಂದಿಗೆ ತಮ್ಮ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಹಾ, ತಂಡದ ಸುಧಾರಣೆಗಾಗಿ ನಾನು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ನಾನು ಯಾವಾಗಲೂ ತಂಡದ ಆಟಗಾರನಾಗಿರುತ್ತೇನೆ.
ತಂಡಕ್ಕೆ ಉತ್ತಮವಾದುದನ್ನು ಮಾಡಲು ಸಿದ್ಧನಿದ್ದೇನೆ. ಜೊತೆಗೆ ಅಭಿಷೇಕ್ ಅವರಂತಹ ಪ್ರತಿಭಾವಂತ ಆಟಗಾರನ ಕ್ರಿಕೆಟ್ ವೃತ್ತಿಜೀವನವನ್ನು ವಿಸ್ತರಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಮತ್ತು ಸಿಎಬಿ ಕಾರ್ಯದರ್ಶಿ ನರೇಶ್ ಓಜಾ ಅವರು ಉಪಸ್ಥಿತರಿದ್ದರು.