ನಾನೇನು ಉತ್ತಮ ನಾಯಕನಲ್ಲ, ತಂಡದಲ್ಲಿ ಅವರಿದ್ದರೆ ಮಾತ್ರ ಗೆಲುವು ಎಂದ ರೋಹಿತ್!

ರೋಹಿತ್ ಶರ್ಮಾ ಓರ್ವ ಆರಂಭಿಕ ಆಟಗಾರನಾಗಿ ಭಾರತ ತಂಡದ ಪರ ಹಲವಾರು ವರ್ಷಗಳಿಂದ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿರುವ ಸ್ಫೋಟಕ ಆಟಗಾರ. ತಾನು ಉತ್ತಮ ಪ್ರದರ್ಶನ ನೀಡಿ ಒಳ್ಳೆಯ ಇನ್ನಿಂಗ್ಸ್ ಕಟ್ಟುವ ಕಾರಣಕ್ಕೆ ಅಭಿಮಾನಿಗಳಿಂದ ಹಿಟ್ ಮ್ಯಾನ್ ಎಂಬ ಬಿರುದನ್ನು ಪಡೆದಿರುವ ರೋಹಿತ್ ಶರ್ಮಾ ಸದ್ಯ ಭಾರತದ ವೈಟ್ ಬಾಲ್ ಕ್ರಿಕೆಟ್ ತಂಡಗಳಿಗೆ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಿದ ಕೂಡಲೇ ನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ ಇದೀಗ ಭಾರತ ಏಕದಿನ ತಂಡದ ನಾಯಕನಾಗಿ ಕೂಡ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಭಾರತ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸಿದ ಟೀಮ್ ಇಂಡಿಯಾ, ಈ ಎರಡೂ ಸರಣಿಗಳಲ್ಲಿಯೂ ನ್ಯೂಜಿಲೆಂಡ್ ತಂಡಕ್ಕೆ ಮಣ್ಣುಮುಕ್ಕಿಸಿ ಸರಣಿಗಳನ್ನು ವಶಪಡಿಸಿಕೊಂಡಿದೆ. ಹೀಗೆ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ ಎರಡೂ ಸರಣಿಗಳಲ್ಲಿಯೂ ಸೋಲುಣಿಸಿದ ಭಾರತ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲು ಸಜ್ಜಾಗುತ್ತಿದ್ದು 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ.
ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಮೊದಲಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುವುದರಿಂದ ಡಿಸೆಂಬರ್ 8ರಂದು ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿತು. ಹಾಗೂ ಇದಕ್ಕೂ ಮುನ್ನ ಮಹತ್ವದ ಘೋಷಣೆಯೊಂದನ್ನು ಮಾಡಿದ ಬಿಸಿಸಿಐ ಆಯ್ಕೆಗಾರರು ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನೂತನ ನಾಯಕನನ್ನಾಗಿ ಆರಿಸಿದ್ದಾರೆ ಎಂದು ಹೇಳಿಕೆಯನ್ನು ನೀಡಿತು. ಈ ಮೂಲಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ಭಾರತ ಏಕದಿನ ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಕೆಲಸ ಆರಂಭಿಸಲಿದ್ದಾರೆ. ಹಾಗೂ ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ 3 ಟಿ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಈಗಾಗಲೇ ಭಾರತ ಟಿ ಟ್ವೆಂಟಿ ತಂಡದ ನಾಯಕನ ಕೆಲಸಗಳನ್ನು ಶುರು ಮಾಡಿದ್ದಾರೆ. ಹೀಗೆ ಭಾರತ ಸೀಮಿತ ಓವರ್ ತಂಡಗಳ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಮಾತನಾಡಿರುವ ರೋಹಿತ್ ಶರ್ಮಾ ತಮ್ಮ ನಾಯಕತ್ವದ ಕುರಿತು ಈ ಕೆಳಕಂಡಂತೆ ಹೇಳಿಕೆಯನ್ನು ನೀಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..

ನಾನೇನು ಉತ್ತಮ ನಾಯಕನಲ್ಲ, ತಂಡದ ಆಟಗಾರರ ಉತ್ತಮ ಪ್ರದರ್ಶನದಿಂದ ಗೆದ್ದೆವು ಎಂದ ರೋಹಿತ್
ಹೀಗೆ ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳೆರಡಕ್ಕೂ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ತಾವು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನವನ್ನೇನೂ ನೀಡಿಲ್ಲ, ಬದಲಾಗಿ ತಂಡದ ಇತರೆ ಆಟಗಾರರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ನಾನು ನಾಯಕನಾಗಿ ಉತ್ತಮನೆನೆಸಿಕೊಂಡೆ ಎಂದು ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ ನಿಜವಾಗಿಯೂ ಹೇಳುತ್ತಿದ್ದೇನೆ, ನಾನು ಮುಂಬೈ ತಂಡದ ಯಶಸ್ಸಿನಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದೇನೆ, ಆದರೆ ಉತ್ತಮ ತಂಡವಿದ್ದ ಕಾರಣ ಉತ್ತಮ ಪ್ರದರ್ಶನ ನೀಡಿದೆವು. ಇಂತಹ ತಂಡವನ್ನು ಕಟ್ಟಿಕೊಟ್ಟಿದ್ದಕ್ಕೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಧನ್ಯವಾದಗಳನ್ನು ಹೇಳಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ಯಶಸ್ಸಿನಲ್ಲಿ ನಾಯಕನಾಗಿ ತನ್ನದೇನೂ ಪಾಲಿಲ್ಲ, ಬದಲಾಗಿ ತಂಡದ ಉಳಿದ ಆಟಗಾರರ ಪ್ರದರ್ಶನದಿಂದ ತಂಡ ಹೆಚ್ಚಾಗಿ ಗೆದ್ದಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಐಪಿಎಲ್ ನಾಯಕನಾಗಿ ರೋಹಿತ್ ಶರ್ಮಾ ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಟ್ರೋಫಿಗಳನ್ನು ಹೊಂದಿರುವ ಏಕೈಕ ನಾಯಕ ಎಂದರೆ ಅದು ರೋಹಿತ್ ಶರ್ಮಾ. ಇದುವರೆಗೂ ನಡೆದಿರುವ ಒಟ್ಟು 14 ಇಂಡಿಯನ್ ಪ್ರಿಮಿಯರ್ ಲೀಗ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವೇ 5 ಆವೃತ್ತಿಗಳಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಟ್ರೋಫಿಯನ್ನು ಗೆದ್ದು ಕೊಟ್ಟಿರುವ ಸಾಧನೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.

ಏಕದಿನ ನಾಯಕನಾಗಿ ರೋಹಿತ್ ಶರ್ಮಾ ಅಂಕಿಅಂಶ
ರೋಹಿತ್ ಶರ್ಮಾ ಇದುವರೆಗೂ ಒಟ್ಟು 10 ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಈ ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ದು, ಕೇವಲ 2 ಪಂದ್ಯಗಳಲ್ಲಿ ಸೋತಿದೆ. ಇನ್ನು 2018ರಲ್ಲಿ ನಡೆದ ಏಷ್ಯಾ ಕಪ್ ಟೂರ್ನಮೆಂಟ್ ವೇಳೆ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದ ಕಾರಣ ಭಾರತ ತಂಡವನ್ನು ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರೇ ಮುನ್ನಡೆಸಿ ಯಶಸ್ವಿಯಾಗಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications