ಐಪಿಎಲ್ 2025 ರಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ. ಈ ಬಾರಿ ಅವರು ಹೆಚ್ಚು ಸದ್ದು ಮಾಡುತ್ತಿಲ್ಲ. ಆದರೂ ಅವರು ಭಾರಿ ಚರ್ಚೆ ಆಗುತ್ತಿದ್ದಾರೆ. ಜೈಸ್ವಾಲ್ ಮುಂಬೈ ತಂಡವನ್ನು ತೊರೆದು ಗೋವಾ ತಂಡವನ್ನು ಸೇರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯಶಸ್ವಿ ಜೈಸ್ವಾಲ್ ಇದ್ದಕ್ಕಿದ್ದಂತೆ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬೈ ಬದಲಿಗೆ ಗೋವಾ ಪರ ದೇಶೀಯ ಕ್ರಿಕೆಟ್ ಆಡುಲಿ ನಿರ್ಧರಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಮುಂಬೈ ತೊರೆದು ಗೋವಾ ಸೇರಲು ಕಾರಣವೇನು? ಎಂಬ ರಹಸ್ಯ ಬಹಿರಂಗವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಬೈ ತಂಡದ ನಾಯಕ ಅಜಿಂಕ್ಯಾ ರಹಾನೆ ಮತ್ತು ಯಶಸ್ವಿ ಜೈಸ್ವಾಲ್ ನಡುವೆ ಎಲ್ಲಾವೂ ಸರಿಯಿಲ್ಲ ಎಂಬುದು ಬಹಿರಂಗಗೊಂಡಿದೆ. ಅಜಿಂಕ್ಯಾ ರಹಾನೆ ಜೊತೆ ಯಶಸ್ವಿ ಜೈಸ್ವಾಲ್ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಇಬ್ಬರು ಆಟಗಾರರ ನಡುವೆ ಬಿರುಕು ಮೂಡಿದೆ.
ವರದಿಗಳ ಪ್ರಕಾರ, 2025 ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಜಮ್ಮು ಕಾಶ್ಮೀರ್ ಸೋಲಿಸಿತು. ಈ ಸೋಲಿನ ನಂತರ ಅಜಿಂಕ್ಯ ರಹಾನೆ ಅವರ ಕಿಟ್‌ಬ್ಯಾಗ್ ಅನ್ನು ಯಶಸ್ವಿ ಜೈಸ್ವಾಲ್ ಒದ್ದಿದ್ದರು. ಇದಾದ ನಂತರ ನಾಯಕ ಮತ್ತು ಕೋಚ್ ಉದ್ದೇಶಪೂರ್ವಕವಾಗಿ ಜೈಸ್ವಾಲ್ ಅವರನ್ನು ಗುರಿಯಾಗಿಸಿಕೊಂಡಿದ್ದರು. ಹೀಗಾಗಿ ಕೋಪಗೊಂಡಿದ್ದ ಜೈಸ್ವಾಲ್ ಮುಂಬೈ ತೊರೆಯುವ ನಿರ್ಧಾರ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಯಶಸ್ವಿ ಜೈಸ್ವಾಲ್ ಎರಡೂ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 4 ಮತ್ತು 26 ರನ್ ಗಳಿಸಿದರು. ಪರಿಣಾಮ ಮುಂಬೈ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 120 ರನ್‌ಗಳಿಗೆ ಆಲೌಟ್ ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಗೆ ಸರ್ವಪತನವಾಗಿತ್ತು. ಇದರೊಂದಿಗೆ ಮುಂಬೈ ಐದು ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.
ಮುಂಬೈ ತಂಡದ ಮುಖ್ಯ ಆಯ್ಕೆದಾರ ಸಂಜಯ್ ಪಾಟೀಲ್ ಯಶಸ್ವಿ ಜೈಸ್ವಾಲ್ ವಿರುದ್ಧ ಕಿಡಿಕಾರಿದ್ದಾರೆ. ಭಾರತ ಪರ ಆಡುವ ಆಟಗಾರರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಲು, ನಾವು ಅನೇಕ ಯುವ ಪ್ರತಿಭಾನ್ವಿತ ಆಟಗಾರರನ್ನು ಹೊರಗಿಡಬೇಕಾಯಿತು. ಮುಂಬೈ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಬಲ್ಲ ಆಟಗಾರರ ಅಗತ್ಯವಿದೆ. ಪಂದ್ಯದಲ್ಲಿ ಲಭ್ಯವಿದ್ದರೆ ಮಾತ್ರ ಏನೂ ಸಾಧಿಸುವುದಿಲ್ಲ ಎಂಬುದನ್ನು ಭಾರತೀಯ ಆಟಗಾರರು ಅರ್ಥಮಾಡಿಕೊಳ್ಳಬೇಕು. ಮುಂಬೈ ಪರ ಆಡುವಾಗ ನಿಮ್ಮ ಶೇಕಡಾ 100 ರಷ್ಟು ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.