WTC Final: ಭಾರತ ಡಬ್ಲ್ಯೂಟಿಸಿ ಫೈನಲ್ ತಲುಪುವ ಲೆಕ್ಕಚಾರ ಹೀಗಿದೆ..
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಪುಣೆ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಕಂಡಿದೆ.
ಭಾರತ ವಿರುದ್ಧ ನ್ಯೂಜಿಲೆಂಡ್ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದು ಬೀಗಿದೆ. ಈ ಮೂಲಕ ಭಾರತ ತವರಿನಲ್ಲಿ ಸತತ 19ನೇ ಟೆಸ್ಟ್ ಸರಣಿ ಗೆಲುವಿಗೆ ಬ್ರೇಕ್ ಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿನ ನಂತರ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ಗೆ ತಲುಪುವ ಟೀಮ್ ಇಂಡಿಯಾದ ಲೆಕ್ಕಚ್ಚಾರ ಬದಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ ತಂಡ 2021 ಮತ್ತು 2023ರಲ್ಲಿ ಡಬ್ಲ್ಯೂಟಿಸಿ ಫೈನಲ್ ಆಡಿದ್ದು, ನ್ಯೂಜಿಲೆಂಡ್ ಹಾಗು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಇದೀಗ ಸತತ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೆ ತಲುಪುವ ಭಾರತದ ಹಾದಿ ಕಠಿಣವಾಗಿದೆ. ಡಬ್ಲ್ಯೂಟಿಸಿ ಫೈನಲ್‌ಗೆ ತಲುಪಲು ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಬೇಕಿದೆ. ಮುಂದಿನ ವರ್ಷ ಜೂನ್ 11 ಮತ್ತು 15 ರ ನಡುವೆ ಇಂಗ್ಲೆಂಡ್ ಲಾರ್ಡ್ಸ್ ಅಂಗಳದಲ್ಲಿ ಡಬ್ಲ್ಯೂಟಿಸಿ ಫೈನಲ್ ಪಂದ್ಯ ನಡೆಯಲಿದೆ. ಜೂನ್ 16 ಅನ್ನು ಮೀಸಲು ದಿನವನ್ನಾಗಿ ಇರಿಸಲಾಗಿದೆ.
ಭಾರತದ ಅಂಕಗಳು ಕುಸಿತ
ನ್ಯೂಜಿಲೆಂಡ್ ವಿರುದ್ಧ ಸತತ ಎರಡು ಟೆಸ್ಟ್ ಪಂದ್ಯಗಳ ಸೋಲಿನ ಬಳಿಕವೂ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಡಬ್ಲ್ಯೂಟಿಸಿ ಅಂಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಆದರೆ, ಟೀಮ್ ಇಂಡಿಯಾದ ಅಂಕಗಳ ಶೇಕಡಾವಾರು (ಪಿಸಿಟಿ) ಕುಸಿತ ಕಂಡಿದೆ. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲಿಗೂ ಮುನ್ನ ಭಾರತ ತಂಡ ಶೇಕಡಾ 74.24 ಅಂಕಗಳನ್ನು (ಪಿಸಿಟಿ) ಹೊಂದಿತ್ತು. ಅಕ್ಟೋಬರ್ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಕ್ಲೀನ್ ಸ್ವೀಪ್ ಮಾಡಿದ ನಂತರ ಭಾರತ ಈ ಅಂಕಗಳನ್ನು ಸಾಧಿಸಿತ್ತು. ಆದರೆ ಒಂದು ತಿಂಗಳು ತುಂಬುವ ಮೊದಲೇ ಭಾರತದ ಅಂಕಗಳ ಶೇಕಡಾವಾರು ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬಂದಿದೆ.
ಬೆಂಗಳೂರು ಟೆಸ್ಟ್ ಪಂದ್ಯ ಸೋಲಿನ ನಂತರ ಭಾರತ ಅಂಕ 68.06 ರಷ್ಟು ಕಡಿಮೆ ಯಾದರೆ, ಪುಣೆ ಟೆಸ್ಟ್ ಪಂದ್ಯದಲ್ಲಿ 113 ರನ್‌ಗಳ ಸೋಲಿನ ಬಳಿಕ 62.82 ಕ್ಕೆ ಅಂಕಗಳು ಇಳಿದಿವೆ. ಭಾರತದ ಆಸ್ಟ್ರೇಲಿಯಾಕ್ಕಿಂತ ಕೇವಲ 0.32 (62.50) ಅಂಕ ಮುಂದಿದೆ. ಕಾಂಗರೂ ಪಡೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.
ಡಬ್ಲ್ಯೂಟಿಸಿ ಫೈನಲ್ ಹಾದಿ
ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸದೆ ಸತತ ಮೂರನೇ ಡಬ್ಲ್ಯೂಟಿಸಿ ಫೈನಲ್‌ಗೆ ಅರ್ಹತೆ ಪಡೆಯಲು, ಭಾರತವು ತನ್ನ ಉಳಿದ 6 ಪಂದ್ಯಗಳಲ್ಲಿ 4 ಅನ್ನು ಗೆಲ್ಲಬೇಕಾಗಿದೆ. ಇದಲ್ಲದೇ ಭಾರತ ಅದಷ್ಟೂ ಪಂದ್ಯಗಳಲ್ಲಿ ಸೋಲನ್ನು ತಪ್ಪಿಸಬೇಕಿದೆ. ಇದು ಕಷ್ಟಕರವಾದ ಕೆಲಸವಾಗಿದೆ. ಏಕೆಂದರೆ ಭಾರತ ತಂಡ ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ತನ್ನ ಉಳಿದ ಆರು ಟೆಸ್ಟ್‌ಗಳಲ್ಲಿ ಐದು ಪಂದ್ಯಗಳನ್ನು ಆಡಲಿದೆ.
ಆಸ್ಟ್ರೇಲಿಯಾ ಪ್ರಸ್ತುತ ಟೆಸ್ಟ್ ಚಾಂಪಿಯನ್ ಆಗಿದ್ದು, ಫೈನಲ್ ತಲುಪಲು ಪ್ರಬಲ ಸ್ಪರ್ಧಿಯಾಗಿದೆ. ಇನ್ನುಳಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲ್ಲಬೇಕಾಗಿದೆ. ಈ ಪೈಕಿ ಐದು ಪಂದ್ಯಗಳು ಭಾರತದ ವಿರುದ್ಧ ನಡೆಯಲಿದೆ. ಹೀಗಾಗಿ ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ಹೆಚ್ಚಾಗಿದೆ.
ಉಳಿದ ತಂಡಗಳಿಗೂ ಅವಕಾಶ?
ಶ್ರೀಲಂಕಾಕ್ಕೂ ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶವಿದೆ. ಆದರೆ ಇದಕ್ಕಾಗಿ ಲಂಕಾ ಉಳಿದ 4 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಬೇಕು. ಜೊತೆಗೆ ಭಾರತ ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಶ್ರೀಲಂಕಾ ತಂಡಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ಗಳು ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡು ಟೆಸ್ಟ್‌ಗಳು ಉಳಿದಿವೆ. ಈ ಎರಡು ಟೆಸ್ಟ್ ಸರಣಿಗಳಲ್ಲಿ ಶ್ರೀಲಂಕಾ ತಂಡಕ್ಕೆ ಗೆಲುವು ಸುಲಭವಿಲ್ಲ.
ಡಬ್ಲ್ಯುಟಿಸಿ ಫೈನಲ್‌ನ ರೇಸ್‌ನಲ್ಲಿ ದಕ್ಷಿಣ ಆಫ್ರಿಕ ತಂಡವು ಭಾರತವನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದೆ.
ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ಇನ್ನೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ನಡಬೇಕಾಗಿದೆ. ಈ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕ ಗೆದ್ದರೆ ಭಾರತವನ್ನು ಹಿಂದಿಕ್ಕಿ ಡಬ್ಲ್ಯೂಟಿಸಿ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಇನ್ನುಳಿದ 5 ಪಂದ್ಯಗಳಲ್ಲಿ ಹರಿಣಗಳ ಪಡೆ 4ರಲ್ಲಿ ಗೆಲ್ಲಬೇಕಿದೆ.
ನ್ಯೂಜಿಲೆಂಡ್ ತಂಡಕ್ಕೂ ಫೈನಲ್ ಪ್ರವೇಶಿಸುವ ಅವಕಾಶವಿದೆ. ಆದರೆ, ಶ್ರೀಲಂಕಾ ವಿರುದ್ಧ 2-0 ಅಂತರದ ಸೋಲಿನ ನಂತರ ಕಿವೀಸ್ ಪಡೆ ಭರವಸೆ ಕುಗ್ಗಿದೆ. ಇನ್ನುಳಿದ ನಾಲ್ಕು ಪಂದ್ಯಗಳನ್ನು ಕಿವೀಸ್ ಪಡೆ ಗೆಲ್ಲಲೇಬೇಕಾಗಿದೆ. ಇದರಲ್ಲಿ ಒಂದು ಪಂದ್ಯ ಭಾರತದ ವಿರುದ್ಧ ಆಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications