ಟೀಮ್ ಇಂಡಿಯಾದ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ಗೆ ಅದ್ಭುತವಾಗಿ
ಪುನರಾಗಮನ ಮಾಡಿದ್ದಾರೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಪಂತ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಈ ಶತಕದೊಂದಿಗೆ ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ತನ್ನ ಸ್ಥಾನದಲ್ಲಿ ಭದ್ರಪಡಿಸಿಕೊಂಡಿದ್ದಾರೆ. ಇತ್ತ ಟೀಮ್ ಇಂಡಿಯಾಕ್ಕೂ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ಗೆ ಮರಳಿರುವುದು ಆನೆ ಬಲ ಬಂತಾಗಿದೆ. ಬಾಂಗ್ಲಾದೇಶ ಬೌಲರ್‌ಗಳ ಬೆವರಿಳಿಸಿದ ಅವರು 128 ಎಸೆತಗಳಲ್ಲಿ 109 ರನ್ ಚಚ್ಚಿದರು. 85.16 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅವರು 13 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಬಾರಿಸಿದರು.

ಭಾರತ ತಂಡಕ್ಕೆ ಪುನರಾಗಮನ ಬಗ್ಗೆ ಮಾತಾನಾಡಿರುವ ರಿಷಬ್ ಪಂತ್ ಅವರ ಕೋಚ್ ದೇವೇಂದ್ರ ಶರ್ಮಾ, 'ರಿಷಭ್ ಅವರ ಇನ್ನಿಂಗ್ಸ್‌ನಿಂದ ತುಂಬಾ ಖುಷಿಯಾಗಿದ್ದೇನೆ. ಮೊದಲ ಇನಿಂಗ್ಸ್‌ನಲ್ಲೂ ಶತಕ ಬಾರಿಸುವ ಅವಕಾಶವಿತ್ತು. ಆದರೆ ಅವರು ಅವಕಾಶವನ್ನು ಕೈ ಚೆಲ್ಲಿದ್ದು ನನಗೆ ಸ್ವಲ್ಪ ಬೇಸರ ತಂದಿತ್ತು. ಇಂದು ಅವರು ನಿರರ್ಗಳವಾಗಿ ಬ್ಯಾಟಿಂಗ್ ಮಾಡಿದರು ಎಂದು ಹೇಳಿದ್ದಾರೆ.
ಈ ಶತಕ ರಿಷಬ್ ಅವರಿಗೆ ಪ್ರಮುಖವಾಗಿದೆ. ಏಕೆಂದರೆ ಇದು ಅವರ ಪುನರಾಗಮನದ ನಂತರ ಅವರ ಮೊದಲ ಅಂತರರಾಷ್ಟ್ರೀಯ ಶತಕವಾಗಿದ್ದು, ಟೆಸ್ಟ್ ವೃತ್ತಿಜೀವನದ ಅವರ ಆರನೇ ಟೆಸ್ಟ್ ಶತಕವಾಗಿದೆ. ಈ ಇನ್ನಿಂಗ್ಸ್‌ನೊಂದಿಗೆ ಅವರು ಎಂಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಧೋನಿ 90 ಟೆಸ್ಟ್‌ಗಳಲ್ಲಿ ಆರು ಶತಕಗಳನ್ನು ಗಳಿಸಿದ್ದರೆ, ಪಂತ್ ಈ ದಾಖಲೆಯನ್ನು ಕೇವಲ 34 ಟೆಸ್ಟ್ ಪಂದ್ಯಗಳಲ್ಲಿ ಮುಟ್ಟಿದರು. ಆರಕ್ಕೂ ಹೆಚ್ಚು ಬಾರಿ 90 ರನ್‌ಗಳ ಗಡಿ ದಾಟಿದ ನಂತರ ಪಂತ್ ಔಟಾಗಿದ್ದಾರೆ.
'ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ದ ಸರಣಿ ಗೆಲ್ಲಲ್ಲು ರಿಷಬ್ ಪಂತ್ ಆಡಿದ ಇನ್ನಿಂಗ್ಸ್ ಯಾವಾಗಲೂ ಎಲ್ಲರಿಗೂ ವಿಶೇಷವಾಗಿರುತ್ತದೆ. ಆದರೆ ಕೋಚ್ ಆಗಿ, ಈ ಇನ್ನಿಂಗ್ಸ್‌ನ ಬಗ್ಗೆ ನನ್ನನ್ನು ಕೇಳಿದರೆ, ಅದು ಅಮೂಲ್ಯವಾಗಿದ್ದು, ಹೆಚ್ಚು ಸೂಕ್ತ ಸಮಯದಲ್ಲಿ ಬರಲು ಸಾಧ್ಯವಾಗಲಿಲ್ಲ. ಪ್ರತಿಯೊಬ್ಬ ಆಟಗಾರನಿಗೆ ಆತ್ಮವಿಶ್ವಾಸ ಬೇಕು. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನೀವು ಎಷ್ಟೇ ಸಾಧನೆ ಮಾಡಿದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ನಿಮ್ಮ ಸಾಧನೆಗಳಿಗೆ ಯಾವಾಗಲೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ದೇವೇಂದ್ರ ಶರ್ಮಾ ತಿಳಿಸಿದ್ದಾರೆ.