ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿನ ಹಾದಿಗೆ ಮರಳಿದೆ. ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ ಮುಂಬೈ ತಂಡದ ಅದೃಷ್ಟ ಮಿಂಚಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ತವರು ಮೈದಾನದಲ್ಲಿ ಮುಂಬೈ ಗೆಲುವಿನ ನಗೆ ಬೀರಿದೆ. ಡೆಲ್ಲಿ ಬ್ಯಾಟರ್ಸ್ ತಂಡಕ್ಕೆ ಗೆಲುವು ತಂದು ಕೊಡುವುದರಲ್ಲಿ ಎಡುವಿದರು. ಪರಿಣಾಮ ಮುಂಬೈ ತಂಡವು ಒಂದು ಓವರ್ ಮೊದಲೇ ಡೆಲ್ಲಿ ತಂಡವನ್ನು ಆಲೌಟ್ ಮಾಡಿ 12 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಮುಂಬೈ ಇಂಡಿಯನ್ಸ್ ನೀಡಿದ 206 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಗೆಲುವಿನ ಹೊಸ್ತಿಲಲ್ಲಿತ್ತು. ಡೆಲ್ಲಿ ಪರ ಅಬ್ಬರಿಸಿದ ಕರುಣ್ ನಾಯರ್ 89 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಆದರೆ ದುರದೃಷ್ಟವಶಾತ್ ನಾಯರ್ ವಿಕೆಟ್ ಕಳೆದುಕೊಂಡ ನಂತರ ಡೆಲ್ಲಿ ತಂಡಕ್ಕೆ ಗೆಲುವು ಸಿಗಲಿಲ್ಲ. ಏಕೆಂದರೆ ಬಳಿಕ ಬಂದ ಕೆಎಲ್ ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಅಗ್ರ ಕ್ರಮಾಂಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ರಯಾನ್ ರಿಕಲ್ಟನ್ 41, ಸೂರ್ಯಕುಮಾರ್ ಯಾದವ್ 40, ತಿಲಕ್ ವರ್ಮಾ 59 ರನ್ ಗಳಿಸಿದರೆ, ನಮನ್ ಧೀರ್ ಕೂಡ 38 ರನ್ ಕಲೆ ಹಾಕದರು. ಈ ಅದ್ಭುತ ಇನ್ನಿಂಗ್ಸ್‌ಗಳ ಆಧಾರದ ಮೇಲೆ ಮುಂಬೈ ತಂಡವು 205 ರನ್‌ಗಳನ್ನು ಗಳಿಸಿತು.
ಮುಂಬೈ ತಂಡದಿಂದ 206 ರನ್‌ಗಳ ಗೆಲುವಿನ ಗುರಿ ಪಡೆದ ಡೆಲ್ಲಿ ತಂಡವು ಉತ್ತಮ ಆರಂಭವನ್ನು ಪಡೆಯಿತು. ಕರುಣ್ ನಾಯರ್ ಕೇವಲ 40 ಎಸೆತಗಳಲ್ಲಿ 89 ರನ್ ಗಳಿಸಿ ಔಟಾದರು. ಬಳಿಕ ಬಂದ ಕೆಎಲ್ ರಾಹುಲ್ ಅವರ ಮೇಲೆ ನಿರೀಕ್ಷೆಯಿತ್ತು. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿ ಡೆಲ್ಲಿ ತಂಡಕ್ಕೆ ಆಸರೆಯಾದ ರಾಹುಲ್ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಮುಂಬೈ ವಿರುದ್ಧವೂ ಗೆಲುವಿನ ಉಡುಗೊರೆ ನೀಡುವ ರಾಹುಲ್ ಯೋಜನೆ ವಿಫಲವಾಯಿತು.
ಡೆಲ್ಲಿ ತಂಡ ಇನ್ನಿಂಗ್ಸ್‌ನ 16ನೇ ಓವರ್‍ನಲ್ಲಿ ಕರಣ್ ಶರ್ಮಾ ಎಸೆತದಲ್ಲಿ ಕೆಎಲ್ ರಾಹುಲ್ ಕ್ಯಾಚ್ ಔಟಾದರು. ಇದು ಡೆಲ್ಲಿ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿತು. ರಾಹುಲ್ 13 ಎಸೆತಗಳಲ್ಲಿ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ರಾಹುಲ್ ವಿಕೆಟ್ ಕಳೆದುಕೊಳ್ಳುತ್ತಿದಂತೆ ಡೆಲ್ಲಿ ಚೇಸಿಂಗ್ ಹಳಿ ತಪ್ಪಿಸಿತು. 27 ಎಸೆತಗಳಲ್ಲಿ ಕೇವಲ 46 ರನ್ ಗಳಿಸುವ ಅಗತ್ಯವಿತ್ತು. ಇಂತಹ ಸಂದರ್ಭದಲ್ಲಿ ಡೆಲ್ಲಿ ಕೇವಲ 33 ರನ್‌ಗಳನ್ನು ಮಾತ್ರ ಗಳಿಸಿತು. 18 ಎಸೆತಗಳ ಅಂತರದಲ್ಲಿ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.