
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಐಪಿಎಲ್‌ನ್ನು ಮುಂದೂಡಲಾಗಿದೆ. ಈ ಬಾರಿ ಐಪಿಎಲ್ ಟೂರ್ನಮೆಂಟ್ ನಡೆಯುತ್ತಾ ಇಲ್ವಾ ಅನ್ನೋದು ಇನ್ನೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರಬ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಮಾಧ್ಯಮದ ಜೊತೆಗೆ ಈ ಬಗ್ಗೆ ಸೌರವ್ ಗಂಗೂಲಿ ಮಾತನಾಡಿದ್ದಾರೆ. 'ನಾನು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ, ಸದ್ಯದ ಪರಿಸ್ಥಿತಿಯಲ್ಲಿ ನಾವು ಏನು ಹೇಳುವ ಸ್ಥಿತಿಯಲ್ಲೂ ಇಲ್ಲ. ಏರ್‌ಪೋರ್ಟ್ ಮುಚ್ಚಿದೆ, ಜನರು ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದಾರೆ, ಕಛೇರಿಗಳು ಸ್ಥಗಿತಗೊಂಡಿದೆ, ಯಾರೂ ಎಲ್ಲೂ ಹೋಗುವ ಪರಿಸ್ಥಿತಿಯಿಲ್ಲ. ಮೇ ತಿಂಗಳ ಮಧ್ಯದ ವರೆಗೂ ಹೀಗೆಯೇ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಸೌರವ್ ಗಂಗೂಲಿ, ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆಯುವ ವಾತಾವರಣವೂ ಇಲ್ಲ, ಎಲ್ಲಿಂದ ಆಟಗಾರರನ್ನು ಕರೆತರುವುದು, ಆಟಗಾರರು ಪ್ರಯಾಣಿಸುವುದು ಹೇಗೆ ಇದು ಸಾಮಾನ್ಯ ಪ್ರಜ್ಞೆ. ಐಪಿಎಲ್ ಬಿಡಿ, ಸದ್ಯ ಯಾವುದೇ ಕ್ರೀಡಾಕೂಟಗಳೂ ವಿಶ್ವದಲ್ಲಿ ನಡೆಯಲು ಸಾಧ್ಯವಿಲ್ಲ ಎಂದು ಗಂಗೂಲಿ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
ಬಳಿಕ ಸೌರವ್ ಗಂಗೂಲಿ ಸೋಮವಾರ ಬಿಸಿಸಿಐ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದಿದ್ದಾರೆ. ಆ ಮಾತುಕತೆಯ ಬಳಿಕ ಎಲ್ಲವೂ ಸ್ಒಷ್ಟವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
"ಬಿಸಿಸಿಐ ಪದಾಧಿಕಾರಿಗಳ ಜೊತೆಗೆ ಸೋಮವಾರ ಮಾತುಕತೆಯನ್ನು ನಡೆಸಿದ ನಂತರ ನಾನು ನಿಮಗೆ ಉತ್ತರವನ್ನು ನಿಡಲು ಸಾಧ್ಯ, ಆದರೆ ಬದುಕೇ ಅತಂತ್ರವಾಗಿರವ ಈ ಸಂದರ್ಭದಲ್ಲಿ ಕ್ರೀಡೆಯ ಭವಿಷ್ಯವನ್ನು ಹೇಗೆ ನಿರ್ಧರಿಸಲು ಸಾಧ್ಯ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.