ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಮುಗಿದಿದೆ. ಈ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದು ಕೊಂಡಿದೆ. ಆದರೆ ಈ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಮ್ಮ ನೈಜ್ಯ ಆಟವನ್ನು ಆಡುವ ಮೂಲಕ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದಾರೆ. ಭಾರತ ಮೂರನೇ ಏಕದಿನ ಪಂದ್ಯವನ್ನು ಗೆಲ್ಲುವಲ್ಲಿ ಈ ಆಟಗಾರರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ಮೂಲಕ ವಿರಾಟ್ ಹಾಗೂ ರೋಹಿತ್ ನಿವೃತ್ತಿಯ ಗಾಳಿ ಸುದ್ದಿಗೆ ಮೈದಾನದಲ್ಲೇ ಉತ್ತರ ನೀಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಆರಂಭವಾಗುವ ಮುನ್ನ ವಿರಾಟ್ ಹಾಗೂ ರೋಹಿತ್ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಸರಣಿಯಲ್ಲಿ ರೋಹಿತ್ ಎರಡು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ನೈಜ್ಯ ಆಟವನ್ನು ಆಡಿದರು. ಇವರಿಬ್ಬರ ಆಟವನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಇವರಿಬ್ಬರನ್ನು ಮತ್ತೆ ಅಖಾಡದಲ್ಲಿ ನೋಡುವುದು ಯಾವಾಗ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟಿ20, ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರಿಬ್ಬರು ಇನ್ನು ಭಾರತದ ಪರ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಅಖಾಡಕ್ಕೆ ಇಳಿಯಲಿದ್ದಾರೆ. ಹೀಗಾಗಿ ಈ ಆಟಗಾರರು ಮತ್ತೆ ಅಖಾಡಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇನ್ನೊಂದು ತಿಂಗಳ ಬಳಿಕ ಮತ್ತೆ ವಿರಾಟ್ ಹಾಗೂ ರೋಹಿತ್ ಶರ್ಮಾ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಕ್ಷಿಣ ಆಫ್ರಿಕಾ ಭಾರತದ ಪ್ರವಾಸವನ್ನು ಬೆಳೆಸಲಿದ್ದು, ಈ ವೇಳೆ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಲಿದೆ. ನವೆಂಬರ್ 30 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ರೋಹಿತ್, ವಿರಾಟ್ ಅಖಾಡಕ್ಕೆ ಇಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನವೆಂಬರ್ 30 ರಂದು ರಾಂಚಿಯಲ್ಲಿ, ಎರಡನೇ ಏಕದಿನ ಪಂದ್ಯ ಡಿಸೆಂಬರ್ 3 ರಂದು ರಾಯ್‌ಪುರದಲ್ಲಿ, ಮೂರನೇ ಪಂದ್ಯ ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಪ್ರವಾಸದ ಮೊದಲ ಪಂದ್ಯದಲ್ಲಿ ಕೊಂಚ ಮಂಕಾಗಿದ್ದ ರೋಹಿತ್ ಶರ್ಮಾ ಅವರ ಬ್ಯಾಟ್ ಆಡಿಲೇಡ್‌ನಲ್ಲಿ ಅಬ್ಬರಿಸಿದೆ. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ 97 ಎಸೆತಗಳನ್ನು ಎದುರಿಸಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿದ್ದರು. ಆದರೆ ಸಿಡ್ನಿ ಮೈದಾನದಲ್ಲಿ ರೋಹಿತ್, ಯುವಕರು ನಾಚುವಂತೆ ಬ್ಯಾಟ್ ಮಾಡಿದರು. 125 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ ಸಿಡಿಸಿರುವ ರೋಹಿತ್ ಶರ್ಮಾ 121 ರನ್ ಬಾರಿಸಿದರು. ಈ ಮೂಲಕ ರೋಹಿತ್ ಮೂರು ಪಂದ್ಯಗಳ ಸರಣಿಯಲ್ಲಿ 202 ರನ್ ಕಲೆ ಹಾಕಿದರು. ಇವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಇವರಿಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.