ಐಪಿಎಲ್ ಇನ್ನು ದೇಶದಲ್ಲಿ ತನ್ನ ಹವಾ ಕ್ರಿಯೇಟ್ ಮಾಡಲಿದೆ. ಈ ಲೀಗ್ ಮುಗಿದ ಬಳಿಕ ವಿಶ್ವದಲ್ಲೆಡೆ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗೆ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಮ್ಯಾಚ್‌ಗಳನ್ನು ಪಂದ್ಯಗಳನ್ನು ಆಡಲಿದೆ. ಈ ಎಲ್ಲ ಪಂದ್ಯಗಳ ಬಳಿಕ ಟೀಮ್ ಇಂಡಿಯಾ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಮಾಡಲಿದೆ. ಈ ವೇಳೆ ಉಭಯ ತಂಡಗಳ ನಡುವೆ ಟೆಸ್ಟ್ ಸರಣಿಯನ್ನು ಆಡಲಾಗುತ್ತದೆ.
ಅಂದಹಾಗೆ ಕಳೆದ ಬಾರಿಯ ಪ್ರವಾಸದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ಮಣಿಸಿ ಅಬ್ಬರಿಸಿತ್ತು. ಈ ಸರಣಿಯ ಮೊದಲ ಪಂದ್ಯದಲ್ಲಿ ಸೋತ ಭಾರತ, ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿತ್ತು.

ಈ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಆಡಿದ ಧಾಟಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯನ್ನು ಸಹ ಅಭಿಮಾನಿಗಳು ನೆನಪು ಹಾರಲು ಸಾಧ್ಯವಿಲ್ಲ. ಈಗ ಮತ್ತೊಮ್ಮೆ ಇಂತಹ ವೇದಿಕೆ ಮೂಹುರ್ತ ಫಿಕ್ಸ್ ಆಗಿದೆ.
2024-25ರ ಬಾರ್ಡರ್ ಗವಾಸ್ಕರ್ ಟ್ರೋಫಿ ಆಗಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಕಾಂಗರೂ ನಾಡಿನಲ್ಲಿ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯ ಪಂದ್ಯಗಳು ಯಾವ ಅಂಗಳದಲ್ಲಿ ನಡೆಯಲಿವೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆಸ್ಟ್ರೇಲಿಯಾದ ಮಾಧ್ಯಮ ವರದಿಗಳು ಎಲ್ಲಾ ಐದು ಟೆಸ್ಟ್‌ಗಳ ಸ್ಥಳಗಳನ್ನು ಬಹಿರಂಗಪಡಿಸಿವೆ.
ವೇಳಾಪಟ್ಟಿ ಕುರಿತು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಸ್ಥಳದ ಬಗ್ಗೆ ಅಧಿಕೃತ ಮಾಹಿತಿಯು ಬಹಿರಂಗಗೊಂಡಿಲ್ಲ. ಇಬ್ಬರ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಯಾವಾಗ ನಡೆಯಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ. 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಂಬಂಧಿಸಿದಂತೆ ಈ ಸರಣಿಯು ಭಾರತ ಮತ್ತು ಆಸ್ಟ್ರೇಲಿಯಾಕ್ಕೆ ಬಹಳ ಮಹತ್ವದ್ದಾಗಿದೆ.

ದಿ ಏಜ್ ಪ್ರಕಾರ, ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಅಡಿಲೇಡ್‌ನಲ್ಲಿ ನಡೆಯಲಿದೆ. ಆಡಿಲೇಡ್‌ನಲ್ಲಿ ನಡೆಯಲಿರುವ ಪಂದ್ಯ ನೈಟ್ ಟೆಸ್ಟ್ ಆಗಿರಲಿದೆ. ನಂತರ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಬಾಕ್ಸಿಂಗ್ ಡೇ ಟೆಸ್ಟ್ ಮೆಲ್ಬೋರ್ನ್ ಅಂಗಳದಲ್ಲಿ ನಡೆಯಲಿದೆ. ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಸಿಡ್ನಿಯಲ್ಲಿ ನಡೆಯಲಿದ್ದು, ಇದು ಹೊಸ ವರ್ಷದ ಟೆಸ್ಟ್ ಆಗಿರುತ್ತದೆ.
ಕಳೆದ ವರ್ಷ 2023 ರಲ್ಲಿ ಭಾರತದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಆತಿಥೇಯ ತಂಡ ಗೆದ್ದು ಬೀಗಿತ್ತು. ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಸರಣಿಯನ್ನು ಸೋತು ನಿರಾಸೆ ಅನುಣವಿಸಿತ್ತು. ತವರು ನೆಲದಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
ನಿಜಕ್ಕೂ ಡಿಸೆಂಬರ್‌ನಲ್ಲಿ ನಡೆಯುವ ಸರಣಿ ಉಭಯ ತಂಡಗಳಿಗೂ ಮಹತ್ವದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿ ಮಹತ್ವ ಪಡೆದಿದೆ. ಈಗಾಗಲೇ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ, ಮೂರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ಕಾಣುತ್ತಿದೆ.