ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಡ್ರಾ ಸಾಧಿಸಲು ಹೋರಾಟ ನಡೆಸಿತು. ಆದರೆ, ಮಳೆಯಿಂದಾಗಿ ಬ್ರಿಸ್ಬೇನ್ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶ ಕಾಣದೆ ಡ್ರಾದಲ್ಲಿ ಅಂತ್ಯ ಕಂಡಿತ್ತು. ಇದರಿಂದ ಟೀಮ್ ಇಂಡಿಯಾ ಪಾಳಯದಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಆದರೆ ಅಶ್ವಿನ್ ಏಕಾಏಕಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮಧ್ಯದಲ್ಲಿ ಕೈಗೊಂಡ ನಿರ್ಧಾರದಿಂದ ಎಲ್ಲರೂ ಶಾಕ್ ಆಗಿದ್ದರು. ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಬಳಿಕ ಅಶ್ವಿನ್ ಅವರು ರೋಹಿತ್ ಶರ್ಮಾ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿವೃತ್ತಿ ಘೋಷಣೆ ಮಾಡಿದರು. ಇದೀಗ ಅಶ್ವಿನ್ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಅಶ್ವಿನ್ ಆಧುನಿಕ ಟೆಸ್ಟ್ ಕ್ರಿಕೆಟ್ ಕಂಡ ದಿಗ್ಗಜ ಬೌಲರ್. ಭಾರತ ತಂಡದ ಪರ ಆಡಿದ ಹಲವು ಸಂದರ್ಭಗಳಲ್ಲಿ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇತ್ತೀಚೆಗೆ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅಶ್ವಿನ್ ತಮ್ಮ ಅಮೋಘ ಪ್ರದರ್ಶನವನ್ನು ನೀಡಿದ್ದರು. ನಂತರ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಮಂಕಾಗಿದ್ದರು. ಈ ವೇಳೆ ಟೀಮ್ ಇಂಡಿಯಾದಲ್ಲಿ ನಿವೃತ್ತಿ ಕೂಗು ಎದ್ದಿತ್ತು. ಇದೀಗ ಅಶ್ವಿನ್ ತಮ್ಮ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಆದರೆ ಅವರು ತಮ್ಮ ನಿವೃತ್ತಿಯ ನಿರ್ಧಾರದ ಹಿಂದಿರುವ ಕಾರಣವನ್ನು ತಿಳಿಸಿಲ್ಲ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಅಶ್ವಿನ್ ವೃತ್ತಿಜೀವನಕ್ಕೆ ವಿಲನ್ ಆದವರು ಯಾರು? ಎಂಬ ಪ್ರಶ್ನೆ ಮೂಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವರದಿಗಳ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮಧ್ಯೆದಲ್ಲಿ ಅಶ್ವಿನ್ ತೆಗೆದುಕೊಂಡ ನಿವೃತ್ತಿ ನಿರ್ಧಾರದ ಹಿಂದೆ ಹೆಡ್ ಕೋಚ್ ಗೌತಮ್ ಗಂಭೀರ್ ಪಾತ್ರ ವಹಿಸಿರುವುದು ತಿಳಿದು ಬಂದಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಭಾರತದಲ್ಲಿ ಉಳಿಯಲು ಅಶ್ವಿನ್ ಬಯಸಿದ್ದರು. ಏಕೆಂದೆರೆ ಅವರಿಗೆ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಭರವಸೆ ಇರಲಿಲ್ಲ. ಅಶ್ವಿನ್ ಜೊತೆಗೆ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಕೂಡ ಸ್ಪಿನ್ನರ್ ಪಾತ್ರ ನಿರ್ವಹಿಸಲು ರೇಸ್‌ನಲ್ಲಿದ್ದರು. ಹೀಗಾಗಿ ಅವರು ಆಡುವ ಹನ್ನೊಂದರಲ್ಲಿ ತಮ್ಮ ಸ್ಥಾನದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯಿಂದ ಭರವಸೆ ಕೋರಿದರು.
ಬಿಸಿಸಿಐ ಆಯ್ಕೆ ಸಮಿತಿ ಕೊಟ್ಟ ಭರವಸೆ ಮೇರೆಗೆ ಅಶ್ವಿನ್ ಟೀಮ್ ಇಂಡಿಯಾ ಜೊತೆ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದರು. ಪರ್ತ್ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಆಡುವ ನಿರೀಕ್ಷೆಯಿತ್ತು. ಆದರೆ, ಪರ್ತ್ ಟೆಸ್ಟ್ ಪಂದ್ಯಕ್ಕೆ ಸ್ಪಿನ್ನರ್ ಆಯ್ಕೆ ಪ್ರಕ್ರಿಯೆಯಲ್ಲಿ ಅಶ್ವಿನ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಡುವ ಅವಕಾಶವನ್ನು ಪಡೆದುಕೊಂಡರು. ಇದು ಅಶ್ವಿನ್ ಅವರಿಗೆ ನೋವುಂಟು ಮಾಡಿತ್ತು. ಪರಿಣಾಮವಾಗಿ, ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಗೆ ಮುಂದುವರಿಯಬೇಕೇ ಎಂದು ಯೋಚಿಸಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ತಮ್ಮ ನಿವೃತ್ತಿ ನಿರ್ಧಾರವನ್ನು ತಿಳಿಸಿದ್ದರು.
ಈ ಸಂದರ್ಭದಲ್ಲಿ ಅಶ್ವಿನ್ ಅವರಿಗೆ ರೋಹಿತ್ ಶರ್ಮಾ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡುವಂತೆ ಮನವಿ ಮಾಡಿದ್ದರು. ಅದರಂತೆ ಅಶ್ವಿನ್ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಮತ್ತೊಮ್ಮ ತಮ್ಮ ಸ್ಥಾನವನ್ನು ಕಳೆದುಕೊಂಡರು. ಈ ಬಾರಿ ಅಶ್ವಿನ್ ಬದಲಿಗೆ ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡಲಾಯಿತು. ಇದಕ್ಕೂ ಮುನ್ನ ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ನಡೆದ ಪರ್ತ್ ಟೆಸ್ಟ್ ಪಂದ್ಯದ ಸಮಯದಲ್ಲಿ ಗೌತಮ್ ಗಂಭೀರ್ ತಮ್ಮ ದಿಟ್ಟ ನಿರ್ಧಾರವನ್ನು ಬಹಿರಂಗಪಡಿಸಿದ್ದರು. ಟೀಮ್ ಇಂಡಿಯಾದಲ್ಲಿ ಆಗಲಿರುವ ಬದಲಾವಣೆಗಳ ಬಗ್ಗೆಯೂ ಗೌತಮ್ ಗಂಭೀರ್ ಸ್ಪಷ್ಟಪಡಿಸಿದರು. ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡ ಅಶ್ವಿನ್ ತಡ ಮಾಡದೆ ಮೂರನೇ ಟೆಸ್ಟ್ ಪಂದ್ಯ ಮುಗಿಯುತ್ತಿದ್ದಂತೆ ತಮ್ಮ ನಿವೃತ್ತಿ ಘೋಷಣೆ ಮಾಡಿದರು. ಅಶ್ವಿನ್ ತಮ್ಮ ವೃತ್ತಿ ಜೀವನಕ್ಕೆ ತೆರೆ ಎಳೆಯಲು ಗೌತಮ್ ಗಂಭೀರ್ ಕಾರಣವೇ ಎಂದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.