ಭಾರತದ ಪರ ಒಲಿಂಪಿಕ್ಸ್ ಕ್ರೀಡೆಯಲ್ಲಿ ಪದಕ ಪಡೆದ ಸಾಧಕ. ಸ್ವಾತಂತ್ರ್ತ ಭಾರತದ ಇತಿಹಾಸದಲ್ಲಿ ಬೇರೆ ಯಾವ ಕ್ರೀಡಾ ಪಟುವೂ ಮಾಡದ ಸಾಧನೆಯನ್ನು ಮಾಡಿರುವ ಯುಗ ಪುರುಷರ ನೀರಜ್ ಚೋಪ್ರಾ. ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. ಒಲಿಂಪಿಕ್ಸ್‌ನ ಟ್ರ್ಯಾಕ್ ಆಂಡ್ ಫೀಲ್ಡ್ ವಿಭಾಗದಲ್ಲಿ ಎರಡು ಪದಕಗಳನ್ನು ಗೆದ್ದ ಸಾಧಕ ನೀರಜ್. 2024ರ ಒಲಿಂಪಿಕ್ಸ್ ಆಗುತ್ತಿದ್ದಂತೆ ನೀರಜ್ ಚೋಪ್ರಾ ಅವರ ಮದುವೆಯ ಸುದ್ದಿ ಬಹುವೇಗವಾಗಿ ಚರ್ಚೆಗೆ ಗ್ರಾಸವಾಗಿತ್ತು.
ಇದೇ ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ವಿಜೇತೆ ಮನು ಭಾಕರ್ ಅವರ ಜೊತೆ ಇವರ ಹೆಸರು ಕೇಳಿಸಿಕೊಂಡಿತ್ತು. ಆದರೆ ಇದ್ಯಾವದಕ್ಕೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೇ ತನ್ನ ನೈಜ ನಗುವಿನ ಮೂಲಕ ನೀರಜ್ ಸುಮ್ಮನಾಗುತ್ತಿದ್ದರು. ಅಲ್ಲದೆ ಪತ್ರಿಕಾಗೋಷ್ಠಿಗಳಲ್ಲಿ ಅದೆಷ್ಟೋ ಬಾರಿ ಇವರಿಗೆ ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಜಾಣ ಉತ್ತರವನ್ನು ನೀಡಿ ಎಸ್ಕೇಪ್ ಆಗ್ತಾ ಇದ್ದರು. ಆದರೆ ಭಾನುವಾರ ನೀರಜ್ ಚೋಪ್ರಾ ಮದುವೆಯ ಫೋಟೋ ಸಖತ್ ವೈರಲ್ ಆಗಿದೆ.

ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಸಾಧನೆ ಮಾಡಿರುವ ನೀರಜ್ ಚೋಪ್ರಾ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆಯ ಫೋಟೋ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಂದಹಾಗೆ ನೀರಜ್ ಚೋಪ್ರಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ ಯುವತಿ ಯಾರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರ, ಪ್ಯಾರೀಸ್‌ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಅವರ ಕೈ ಹಿಡಿದ ಹಿಮಾನಿ ಮೋರ್ ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಅಸಲಿಗೆ ಹಿಮಾನಿ ಒಬ್ಬ ಟೇನಿಸ್ ಆಟಗಾರ್ತಿ ಜೊತೆಗೆ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಇವರು ಲೂಸಿಯಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಹಿಮಾನಿ ಯುನೈಟೆಡ್ ಸ್ಟೇಟ್ಸ್‌ನ ಮೆಕ್‌ಕಾರ್ಮ್ಯಾಕ್ ಇಸೆನ್‌ಬರ್ಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಕ್ರೀಡಾ ನಿರ್ವಹಣೆ ಮತ್ತು ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆಯುತ್ತಿದ್ದಾರೆ. ಅಲ್ಲದೆ ಟೆನಿಸ್‌ನಲ್ಲಿ ಸಹಾಯಕ ತರಬೇತುದಾರರಾಗಿ ಕೆಲಸ ಮಾಡಿದ ಅನುಭವ ಇದೆ. ಅಮ್ಹೆರ್ಸ್ಟ್ ಕಾಲೇಜಿನಲ್ಲಿ ಅವರು ಕೆಲಸವನ್ನು ಮಾಡುತ್ತಿದ್ದಾರೆ. ಈ ವೇಳೆ ಅವರು ಟೆನಿಸ್ ಆಟಗಾರರ ತರಬೇತಿ, ನೇಮಕಾತಿ, ಬಜೆಟ್ ಮತ್ತು ವೇಳಾಪಟ್ಟಿಗಳ ನೋಡಿಕೊಳ್ಳುತ್ತಿದ್ದಾರೆ.

ನೀರಜ್ ಚೋಪ್ರಾ ಮದುವೆಯ ಸುದ್ದಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಖ್ಯಾತ ಜಾವೆಲಿನ್ ಪಟುಗೆ ಅಭಿನಂದನೆ ತಿಳಿಸಿದ್ದಾರೆ. ನೀರಜ್ ಯಾವುದೇ ಕಾರ್ಯಕ್ರಮದಲ್ಲಾದ್ರೂ ಸಹ ತನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿರಲಿಲ್ಲ.
ನೀರಜ್ ಚೋಪ್ರಾ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕುತ್ತಿದ್ದಂತೆ ಸದ್ದು ಮಾಡಿವೆ. ಕುಟುಂಬಸ್ಥರು ಹಾಗೂ ತೀರಾ ಆಪ್ತರು ಮಾತ್ರ ಈ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ನೀರಜ್ ಚೋಪ್ರಾ ಫೋಟೋದಲ್ಲಿ ಪತ್ನಿಯೊಂದಿಗೆ ಮದುವೆಯ ವಿಧಿ ವಿಧಾನಗಳನ್ನು ಆಚರಿಸುತ್ತಿರುವುದು ಕಂಡು ಬಂದಿದೆ.