ನವಿ ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 3 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ ಅಮೋಘ ಪ್ರದರ್ಶನ ನೀಡಿ, ತಂಡಕ್ಕೆ ಜಯದ ಮಾಲೆ ತೊಡಿಸಿದ್ದಾರೆ. ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟ ಆಟಗಾರ್ತಿ ನಾಡಿನ್ ಡಿ ಕ್ಲರ್ಕ್ ಯಾರು? ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ.
ನಾಡಿನ್ ಡಿ ಕ್ಲರ್ಕ್ 4ನೇ ಆವೃತ್ತಿಯ ಡಬ್ಲ್ಯೂಪಿಎಲ್‌ನ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ತಮ್ಮ ಆಲ್‌ರೌಂಡರ್ ಆಟದ ಮೂಲಕ ನಾಡಿನ್ ಡಿ ಕ್ಲರ್ಕ್ ಎಲ್ಲರ ಗಮನ ಸೆಳೆದಿದ್ದಾರೆ. ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಪಡೆದ ನಾಡಿನ್ ಡಿ ಕ್ಲರ್ಕ್, ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಧಾರವಾದ ಆಟಗಾರ್ತಿ. ಇವರು ಸೋಲಿನ ದವಡೆಯಿಂದ ತಂಡವನ್ನು ಪಾರುಮಾಡಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ 25 ವರ್ಷದ ಆಲ್‌ರೌಂಡರ್, ಎಲ್ಲಿಸ್ ಪೆರ್ರಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬ ಬಲ್ಲ ವಿಶ್ವಾಸವನ್ನು ಮೂಡಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ನಾಡಿನ್ ಡಿ ಕ್ಲರ್ಕ್ ಆರ್‌ಸಿಬಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿದ್ದಾರೆ. ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ನಾಡಿನ್ ಡಿ ಕ್ಲರ್ಕ್ ತಮ್ಮ ನೈಜ ಆಟದಿಂದಲೇ ರನ್‌ಗಳನ್ನು ಕಲೆ ಹಾಕುತ್ತಲೇ ಸಾಗಿದರು. ಒತ್ತಡವನ್ನು ತಮ್ಮ ಮೇಲೆ ಎಳೆದುಕೊಳ್ಳದೇ ಎದುರಾಳಿಗೆ ಕಾಟ ನೀಡಿದರು.
ನಾಡಿನ್ ಡಿ ಕ್ಲರ್ಕ್ 63 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. ರಾಧಾ ಯಾದವ್ ಔಟ್ ಆದ ಬಳಿಕ ಕ್ರೀಸ್‌ಗೆ ಬಂದ ಇವರು ಸ್ಪಿನ್ ಬೌಲರ್ಸ್ ಹಾಗೂ ವೇಗದ ಬೌಲರ್‌ಗಳ ಮನಬಂದಂತೆ ದಂಡಿಸಿದರು. ಇವರು 44 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 63 ರನ್ ಸಿಡಿಸಿದರು. ಕೊನೆಯ ಓವರ್‌ನಲ್ಲಿ ಕಮಾಲ್ ಪ್ರದರ್ಶನ ನೀಡಿದ ನಾಡಿನ್ ಡಿ ಕ್ಲರ್ಕ್ ಆರ್‌ಸಿಬಿ ಶುಭಾರಂಭ ಮಾಡಲು ಕಾರಣರಾದರು.

ಮಹಿಳಾ ಪ್ರೀಮಿಯರ್ ಲೀಗ್ 2026ರ ಮೆಗಾ ಹರಾಜಿನಲ್ಲಿ ನಾಡಿನ್ ಡಿ ಕ್ಲರ್ಕ್ ಅವರನ್ನು ಆರ್‌ಸಿಬಿ ಖರೀದಿಸಿತ್ತು. ಇವರಿಗೆ ಆರ್‌ಸಿಬಿ 65 ಲಕ್ಷ ರೂ. ನೀಡಿ ಖರೀದಿಸಿತ್ತು. ನಾಡಿನ್ ಡಿ ಕ್ಲರ್ಕ್ ಅವರ ಮೂಲ ಬೆಲೆ 30 ಲಕ್ಷ ರೂ. ಆಗಿತ್ತು. ಇವರಿಗೆ ಆರ್‌ಸಿಬಿ ದೊಡ್ಡ ಮೊತ್ತ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.
ನಾಡಿನ್ ಡಿ ಕ್ಲರ್ಕ್ ಅಕ್ಟೋಬರ್ 9 ರಂದು ಮಹಿಳಾ ವಿಶ್ವಕಪ್ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ ಆಟಗಾರ್ತಿ. ಅಂದು ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 251 ರನ್ ಗಳಿಸಿತ್ತು. ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ 81 ರನ್‌ಗಳಿಗೆ 5 ವಿಕೆಟ್ ಕಳೆದಿಕೊಂಡು ಸಂಕಷ್ಟದಲ್ಲಿತ್ತು. ಆ ಪಂದ್ಯದಲ್ಲಿ ನಾಡಿನ್ ಡಿ ಕ್ಲರ್ಕ್ ಅಮೋಘ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ 54 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅಜೇಯ 84 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ನಾಡಿನ್ ಡಿ ಕ್ಲರ್ಕ್ ಈಗಾಗಲೇ ದಕ್ಷಿಣ ಆಫ್ರಿಕಾದ ಪರ ಮೂರು ಫಾರ್ಮೆಟ್‌ಗಳಲ್ಲಿ ಪದಾರ್ಪಣೆ ಮಾಡಿದ ಹಿರಿಮೆ ಹೊಂದಿದ್ದಾರೆ. ಇವರು 70 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 667 ರನ್ ಸಿಡಿಸಿದ್ದಾರೆ. ಈ ವೇಳೆ 52 ವಿಕೆಟ್ ಸಹ ಕಬಳಿಸಿದ್ದಾರೆ.