ಐರ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಉಭಯ ತಂಡಗಳ ನಡುವಿನ ಮೂರನೇ ಮತ್ತು ಕೊನೆಯ ಪಂದ್ಯ ಬುಧವಾರ ರಾಜ್‌ಕೋಟ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎಲ್ಲಾ ದಾಖಲೆಗಳನ್ನು ಮುರಿದಿದೆ. ಅನುಭವಿ ಆರಂಭಿಕ ಬ್ಯಾಟರ್ ಹಾಗು ನಾಯಕಿ ಸ್ಮೃತಿ ಮಂಧಾನ ಮತ್ತು ಯುವ ಬ್ಯಾಟರ್ ಪ್ರತೀಕಾ ರಾವಲ್ ಬ್ಯಾಟಿಂಗ್‌ನಲ್ಲಿ ಬಿರುಗಾಳಿ ಎಬ್ಬಿಸಿದರು. ಇಬ್ಬರೂ ಆಟಗಾರ್ತಿಯರು ಶತಕ ಬಾರಿಸುವ ಮೂಲಕ ಐರ್ಲೆಂಡ್ ತಂಡದ ಬೌಲರ್‌ಗಳನ್ನು ಕಾಡಿದರು.
ಸ್ಮೃತಿ ಮಂಧಾನ 80 ಎಸೆತಗಳಲ್ಲಿ ಅವರು 12 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 135 ರನ್ ಗಳಿಸಿದರು. ಸ್ಮೃತಿ ಮಂಧಾನ ಅವಿಗೆ ಪ್ರತೀಕಾ ರಾವಲ್ ಉತ್ತಮ ಸಾಥ್ ನೀಡಿದರು. 24 ವರ್ಷದ ಪ್ರತೀಕಾ 129 ಎಸೆತಗಳಲ್ಲಿ 154 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ವೃತ್ತಿಜೀವನದ ಮೊದಲ ಏಕದಿನ ಶತಕವನ್ನು ಗಳಿಸಿದರು. ಇದು ಅವರ ವೃತ್ತಿ ಜೀವನದ ಆರನೇ ಏಕದಿನ ಪಂದ್ಯವಾಗಿದೆ.

ಪ್ರತೀಕಾ ರಾವಲ್ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಆರು ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರು 6 ಪಂದ್ಯಗಳಲ್ಲಿ 444 ರನ್ ಗಳಿಸಿದ್ದಾರೆ. ಇದರಲ್ಲಿ 56 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿವೆ. ಅವರು 40, 76, 18, 89, 67 ಮತ್ತು 154 ರನ್ ಗಳಿಸುವ ಮೂಲಕ ಇಂಗ್ಲೆಂಡ್‌ನ ಮಾಜಿ ನಾಯಕಿ ಷಾರ್ಲೆಟ್ ಎಡ್ವರ್ಡ್ಸ್ ಅವರ ಮೊದಲ ಆರು ಏಕದಿನ ಇನ್ನಿಂಗ್ಸ್‌ಗಳಲ್ಲಿ 434 ರನ್ ಗಳಿಸಿದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಪ್ರತೀಕಾ ರಾವಲ್ ಮೂಲತಃ ನವದೆಹಲಿಯವರು. ಸೆಪ್ಟೆಂಬರ್ 1, 2000 ರಂದು ದೆಹಲಿಯಲ್ಲಿ ಜನಿಸಿದ ಪ್ರತೀಕಾ ಹತ್ತನೇ ವಯಸ್ಸಿನಲ್ಲಿ ಕ್ರಿಕೆಟ್ ಆಟದ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರು. ಅವರು ಆರಂಭದಲ್ಲಿ ಮನೋವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಕ್ರಿಕೆಟ್ ಮೇಲಿನ ಅವರ ಅಪಾರ ಪ್ರೀತಿ ಓದಿನ ಕಡೆ ಹೋಗಲಿಲ್ಲ.
ಪ್ರತೀಕಾ ಅವರು 2021 ರ ಹಿರಿಯ ಮಹಿಳಾ ಏಕದಿನ ಟ್ರೋಫಿಯಲ್ಲಿ ಸ್ಥಾನ ಪಡೆದಿದ್ದರು. ಈ ವೇಳೆ ಅವರು ಆಡಿದ ಏಳು ಪಂದ್ಯಗಳಲ್ಲಿ 78.41 ಸ್ಟ್ರೈಕ್ ರೇಟ್ ಮತ್ತು 49.40 ರ ಸರಾಸರಿಯಲ್ಲಿ 247 ರನ್ ಗಳಿಸಿದರು. ಅಸ್ಸಾಂ ವಿರುದ್ಧ 155 ಎಸೆತಗಳಲ್ಲಿ 19 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 161 ರನ್ ಬಾರಿಸಿದ್ದರು. ಹೀಗೆ ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಅವರು ಡಿಸೆಂಬರ್ 2024 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ್ದರು.
ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರತೀಕಾ ರಾವಲ್ ತಮ್ಮ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿದ್ದಾರೆ. 'ನಾನು ಜನರ ಮನಸ್ಸಿನ ಬಗ್ಗೆ ಓದಲು ಬಯಸುತ್ತೇನೆ. ಸೈಕಾಲಜಿ ಓದಲು ಪ್ರಾರಂಭಿಸಿದಾಗ, ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ನಾವು ಹೇಗೆ ಮಾನಸಿಕವಾಗಿ ವಿಷಯಗಳನ್ನು ನಿಭಾಯಿಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ತುಂಬಾ ಕುತೂಹಲವಿತ್ತು.
ಇದು ಕ್ರಿಕೆಟ್‌ನಲ್ಲಿಯೂ ನನಗೆ ಸಾಕಷ್ಟು ಸಹಾಯ ಮಾಡಿದೆ. ಪಂದ್ಯಕ್ಕೂ ಮುನ್ನ ಮೈದಾನದಲ್ಲಿರುವಾಗ ನನ್ನೊಂದಿಗೆ ಸಾಕಷ್ಟು ಸಕಾರಾತ್ಮಕ ವಿಷಯಗಳನ್ನು ಮಾತನಾಡಿಕೊಳ್ಳುತ್ತೇನೆ. ನಾನು ಬ್ಯಾಟಿಂಗ್ ಮಾಡುವಾಗ ನನ್ನನ್ನೇ ನೋಡುತ್ತೇನೆ ಎಂದು ಹೇಳಿದ್ದಾರೆ.
ದೆಹಲಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಮನೋವಿಜ್ಞಾನ ಪದವೀಧರರಾದ ಪ್ರತೀಕಾ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದರು. ಅವರು ಸಿಬಿಸಿಇ 12ನೇ ಬೋರ್ಡ್ ಪರೀಕ್ಷೆಯಲ್ಲಿ 92.5 ಶೇಕಡಾ ಅಂಕಗಳನ್ನು ಗಳಿಸಿದ್ದರು.