ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಂದು ಮೆಲ್ಬರ್ನ್‌ನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ಗೆಲುವಿನ ರಣತಂತ್ರವನ್ನು ರೂಪಿಸಿಕೊಳ್ಳುತ್ತಿದೆ. ಈ ಸರಣಿಯ ಮೂರು ಪಂದ್ಯಗಳು ಮುಗಿದಿವೆ. ಈ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಈಗ ನಾಲ್ಕನೇ ಟೆಸ್ಟ್‌ಗೆ ತಯಾರಿ ನಡೆಸಿವೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ಭರ್ಜರಿ ತಯಾರಿ ನಡೆಸಿದ್ದು, ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಯುವ ಬ್ಯಾಟರ್‌ಗೆ ಸ್ಥಾನ ನೀಡಿದೆ.
ನಾಲ್ಕನೇ ಟೆಸ್ಟ್‌ಗೆ ಪ್ರಕಟಿತ ತಂಡದಲ್ಲಿ ಆಸ್ಟ್ರೇಲಿಯಾ 19ರ ಹರೆಯದ ಸ್ಯಾಮ್ ಕಾನ್‌ಸ್ಟಾಸ್ ಅವರಿಗೆ ಅವಕಾಶ ನೀಡಿದೆ. ಇನ್ನು ಗಾಯದಿಂದ ಜೋಶ್ ಹ್ಯಾಜಲ್‌ವುಡ್ ತಂಡದಿಂದ ಹೊರಗುಳಿಯಲಿದ್ದಾರೆ. ಇವರ ಸ್ಥಾನದಲ್ಲಿ ಜಾಯ್ ರಿಚರ್ಡ್‌ಸನ್ ತಂಡವನ್ನು ಸೇರಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡದೆ ಇರದು.

ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿರುವ ಆಟಗಾರ. ಇವರು ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಶೈಲಿಯಿಂದ ಹಲವರ ಮನ ಗೆದ್ದಿದ್ದಾರೆ. ಇವರು ಇತ್ತೀಚಿಗೆ ಭಾರತ ಹಾಗೂ ಪ್ರೈಮಿನಿಸ್ಟರ್ ಇಲೆವೆನ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಇದೇ ವೇಳೆ ಟೀಮ್ ಇಂಡಿಯಾದ ಪ್ರಮುಖ ಬೌಲರ್‌ಗಳ ವಿರುದ್ಧ ರನ್ ಕಲೆ ಹಾಕಿ ಅಬ್ಬರಿಸಿದ್ದರು. ಇವರು ನಾಥನ್ ಮೆಕ್‌ಸ್ವೀನಿ ಬಲದಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನಾಥನ್ ಮೆಕ್‌ಸ್ವೀನಿ ತವರಿನಲ್ಲಿ ನಡೆಯುತ್ತಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ಉಸ್ಮಾನ್ ಖವಾಜ ಜೊತೆ ಇನಿಂಗ್ಸ್ ಆರಂಭಿಸಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಸ್ಥಾನದ ಮೇಲೆ ಅಪಾಯದ ತೂಗುತ್ತಿ ನೇತಾಡುತ್ತಿತ್ತು. ಈಗ ಆಸೀಸ್ ಆಯ್ಕೆ ಸಮಿತಿ 19 ವರ್ಷದ ಯುವ ಆಟಗಾರನ ಆಟದ ಮೇಲೆ ಭರವಸೆ ಇಟ್ಟು ತಂಡಕ್ಕೆ ಸೇರಿಸಿಕೊಂಡಿದೆ. ಇವರು ಈಗಾಗಲೇ ಭಾರತೀಯ ಬೌಲರ್‌ಗಳ ವಿರುದ್ಧ ರನ್ ಕಲೆ ಹಾಕಿ ಅಬ್ಬರಿಸಿದ್ದಾರೆ. ಅಲ್ಲದೆ ಈಗಾಗಲೇ ಪ್ರೈಮಿನಿಸ್ಟರ್ ಇಲೆವೆನ್ ಪರ ಶತಕ ಬಾರಿಸಿ ಆರ್ಭಟಿಸಿದ್ದಾರೆ. ಈ ಇನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್ ಸೇರಿವೆ.
ಸ್ಯಾಮ್ ಕಾನ್‌ಸ್ಟಾಸ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ಸ್ ಪರ ಬ್ಯಾಟ್ ಮಾಡಿ ಗಮನ ಸೆಳೆದಿದ್ದಾರೆ. ಇವರು ಡಿಸೆಂಬರ್ 17 ರಂದು ನಡೆದ ಆಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಅಬ್ಬರಿಸಿದ್ದಾರೆ. ಇವರು 27 ಎಸೆತಗಳಲ್ಲಿ 56 ರನ್ ಗಳಿಸಿದರು. ಈ ವೇಳೆ 8 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ್ದಾರೆ. ಇವರ ಅಮೊಘ ಆಟದ ಫಲವಾಗಿ ಸಿಡ್ನಿ ಥಂಡರ್ಸ್ 2 ವಿಕೆಟ್ ಜಯ ಸಾಧಿಸಿತು. 19 ವರ್ಷದ ಯುವ ಆಟಗಾರ ಸ್ಯಾಮ್ 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 42.23ರ ಸರಾಸರಿಯಲ್ಲಿ 718 ರನ್ ಸಿಡಿಸಿದ್ದಾರೆ.