ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತವರಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 4 ರನ್‌ಗಳ ಸೋಲನ್ನು ಅನುಭವಿಸಿತು. ಇದರೊಂದಿಗೆ ಐಪಿಎಲ್ 2025 ರಲ್ಲಿ ಲಕ್ನೋ ತಂಡ ಮೂರನೇ ಗೆಲುವು ಸಾಧಿಸಿದೆ. ಕೋಲ್ಕತ್ತಾ ತಂಡ ಐದು ಪಂದ್ಯಗಳಲ್ಲಿ ಮೂರನೇ ಸೋಲು ಕಂಡಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಲಕ್ನೋ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 238 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೋಲ್ಕತ್ತಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 234 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ರೋಚಕವಾಗಿತು. ಕೊನೆಯ ಓವರ್ ವರೆಗೂ ವಿಜಯ ಲಕ್ಷ್ಮಿ ಯಾವ ತಂಡ ಸೇರುತ್ತಾಳೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಈ ಪಂದ್ಯದಲ್ಲಿ ಕೆಕೆಆರ್ ಪರ ಕೊನೆಯ ಓವರ್‍ನಲ್ಲಿ ಫಿನಿಶರ್ ರಿಂಕು ಸಿಂಗ್ ಹೀರೋ ಆದರು.

ರಿಂಕು ಸಿಂಗ್ ಅವರ ಅಜೇಯ ಬ್ಯಾಟಿಂಗ್ ಹೊರತಾಗಿಯೂ, ಕೆಕೆಆರ್ ತಂಡವು ಎಲ್‌ಎಸ್‌ಜಿ ನೀಡಿದ 238 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಪರ ಐಡೆನ್ ಮಾರ್ಕ್ರಾಮ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿದರೆ. ಮಿಚೆಲ್ ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳಿಂದ 81 ರನ್ ಕಲೆ ಹಾಕಿದರು. ನಿಕೋಲಸ್ ಪೂರನ್ 36 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ ಅಜೇಯ 87 ರನ್ ಬಾರಿಸಿದರು. ಇವರಲ್ಲದೆ, ತಂಡದ ಪರವಾಗಿ ಅಬ್ದುಲ್ ಸಮದ್ 6 ರನ್ ಮತ್ತು ಡೇವಿಡ್ ಮಿಲ್ಲರ್ 4 ರನ್ ಗಳಿಸಿದರು. ಕೆಕೆಆರ್ ಪರ ಹರ್ಷಿತ್ ರಾಣಾ 2 ವಿಕೆಟ್ ಮತ್ತು ಆಂಡ್ರೆ ರಸೆಲ್ 1 ವಿಕೆಟ್ ಪಡೆದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 239 ರನ್‌ಗಳ ಗುರಿಯನ್ನು ಬೆನ್ನಟ್ಟಲು ಕ್ವಿಂಟನ್ ಡಿ ಕಾಕ್ ಮತ್ತು ಸುನಿಲ್ ನರೈನ್ ಬಂದರು. ಇಬ್ಬರೂ ಕ್ರಮವಾಗಿ 15 ಮತ್ತು 30 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ನಂತರ ಅಜಿಂಕ್ಯ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ರಹಾನೆ 35 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 61 ರನ್ ಗಳಿಸಿದರು. ಅಯ್ಯರ್ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು. ಕೊನೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಜವಾಬ್ದಾರಿ ರಿಂಕು ಸಿಂಗ್
ಮೇಲೆ ಬಿತ್ತು.
ಕೊನೆಯ ಓವರ್‌ನಲ್ಲಿ ಕೋಲ್ಕತ್ತಾ ಗೆಲುವಿಗೆ 24 ರನ್‌ಗಳು ಬೇಕಾಗಿದ್ದವು. ರಿಂಕು ಸಿಂಗ್ ಮತ್ತು ಹರ್ಷಿತ್ ರಾಣಾ ಕ್ರೀಸ್‌ನಲ್ಲಿದ್ದರು. ರವಿ ಬಿಷ್ಣೋಯ್ ಅವರ ಈ ಓವರ್‌ನ ಮೊದಲ ಎಸೆತದಲ್ಲಿ ಹರ್ಷಿತ್ ರಾಣಾ ಬೌಂಡರಿ ಬಾರಿಸಿದರು. ಬಳಿಕ ಅವರು ಎರಡನೇ ಎಸೆತವನ್ನು ತಪ್ಪಿಸಿಕೊಂಡರು. ಮೂರನೇ ಎಸೆತದಲ್ಲಿ ಹರ್ಷಿತ್ ಸಿಂಗಲ್ ರನ್ ಕದ್ದರು. ಈ ವೇಳೆ ಕೋಲ್ಕತ್ತಾಗೆ 3 ಎಸೆತಗಳಲ್ಲಿ 19 ರನ್‌ಗಳ ಅಗತ್ಯವಿತ್ತು. ಆಗ ರಿಂಕು ಸಿಂಗ್ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರೆ ಪಂದ್ಯ ಸೂಪರ್ ಓವರ್‌ಗೆ ಹೋಗುತ್ತಿತ್ತು. ಆದಾಗ್ಯೂ, ಇದು ನಡೆಯಲಿಲ್ಲ.
ರಿಂಕು ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ನಂತರ ಅವರು ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಆದರೆ ಕೋಲ್ಕತ್ತಾ ತಂಡವು ಗುರಿಯನ್ನು ತಲುಪುವಲ್ಲಿ ವಿಫಲವಾಯಿತು. ರಿಂಕು ಸಿಂಗ್ 15 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಅಜೇಯ 38 ರನ್ ಗಳಿಸಿದರು. ಆದರೆ ಅವರ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಲಕ್ನೋ ಪರ ಆಕಾಶ್‌ದೀಪ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಆವೇಶ್ ಖಾನ್, ದಿಗ್ವೇಶ್ ರಥಿ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.