ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಮಧ್ಯಾಹ್ನ 1:30 ರಿಂದ ನಡೆಯಲಿದೆ. ಟೀಮ್‌ಇಂಡಿಯಾ ಮ್ಯಾನೇಜ್ಮೆಂಟ್‌ಗೆ ದೊಡ್ಡ ತಲೆನೋವೆಂದರೆ ಏಕದಿನ ತಂಡದಲ್ಲಿರುವ ಇಬ್ಬರು ವಿಕೆಟ್ ಕೀಪರ್‌ಗಳಾದ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್‌ರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು. ಇಂಗ್ಲೆಂಡ್ ವಿರುದ್ಧದ ನಾಗ್ಪುರ ಏಕದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಏಕದಿನ ತಂಡದಲ್ಲಿ ಸ್ಥಾನ ಪಡೆಯುವುದು ತಲೆನೋವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪಂತ್ ತಮ್ಮ ಪಾತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಸೂಚಿಸಿದ್ದರು.
2023ರ ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದರು. ರಾಹುಲ್ ಅದ್ಭುತ ಕ್ಯಾಚ್‌ಗಳನ್ನು ಪಡೆಯುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ವಿಕೆಟ್‌ಕೀಪರ್ ಬಗ್ಗೆ ರೋಹಿತ್ ಶರ್ಮಾ ಸುಳಿವು ಕೊಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, 'ಕಳೆದ ಹಲವು ವರ್ಷಗಳಿಂದ ಕೆಎಲ್ ರಾಹುಲ್ ಏಕದಿನ ಮಾದರಿಯಲ್ಲಿ ನಮ್ಮ ಪರವಾಗಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಈ ಸಂದಭದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ 10-15 ಏಕದಿನ ಪಂದ್ಯಗಳನ್ನು ನೋಡಿದರೆ, ತಂಡವು ಅವರಿಂದ ನಿರೀಕ್ಷಿಸಿದ್ದನ್ನು ಅವರು ಮಾಡಿದ್ದಾರೆ. ಇದಲ್ಲದೆ, ವಿಕೆಟ್‌ಕೀಪರ್ ಆಗಿ ರಿಷಭ್ ಪಂತರ ಕೂಡ ಇದ್ದಾರೆ.
ಇದೀಗ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಇಬ್ಬರೂ ಸ್ವಂತ ಬಲದಿಂದ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಾಹುಲ್ ಮತ್ತು ರಿಷಭ್ ನಡುವೆ ಯಾರನ್ನು ಆಡಿಸಬೇಕೆಂದು ನಿರ್ಧರಿಸುವುದು ತಲೆನೋವಾಗಿದೆ. ಆದರೆ ಹಿಂದಿನ ಪ್ರದರ್ಶನಗಳನ್ನು ನೋಡಿದರೆ, ನಿರಂತರತೆಯನ್ನು ಕಾಯ್ದುಕೊಳ್ಳುವುದು ನಮಗೆ ಬಹಳ ಮುಖ್ಯ ಎಂದಿದ್ದಾರೆ.
ಭಾರತ ತಂಡವು ವರುಣ್ ಚಕ್ರವರ್ತಿಯನ್ನು ಏಕದಿನ ತಂಡಕ್ಕೆ ಸೇರಿಸಿಕೊಂಡಿದ್ದು, ಅವಕಾಶ ಸಿಕ್ಕರೆ ಫಾರ್ಮ್‌ನಲ್ಲಿರುವ ಮಿಸ್ಟರಿ ಸ್ಪಿನ್ನರ್ ಅವರನ್ನು ಸೇರಿಸಿಕೊಳ್ಳಬಹುದು ಎಂದು ರೋಹಿತ್ ಹೇಳಿದ್ದಾರೆ. 'ವರುಣ್ ತಮ್ಮ ಬೌಲಿಂಗ್‌ನಲ್ಲಿ ವಿಭಿನ್ನವಾದದ್ದನ್ನು ಮಾಡಿದ್ದಾರೆ. ಇದನ್ನು ಟಿ20 ಸ್ವರೂಪದಲ್ಲಿ ಮಾಡಲಾಗಿದೆ ಎಂದು ನನಗೆ ಅರ್ಥವಾಗಿದೆ. ಆದರೆ ಅದರಲ್ಲಿ ಏನೋ ವ್ಯತ್ಯಾಸವಿದೆ. ಹಾಗಾಗಿ ನಮಗೆ ಒಂದು ಆಯ್ಕೆ ಇದ್ದು, ಅದರಿಂದ ನಾವು ಏನು ಮಾಡಬಹುದೆಂದು ನೋಡಬೇಕಿದೆ ಎಂದು ವರುಣ್ ಚಕ್ರವರ್ತಿ ಆಡುವ ಬಗ್ಗೆ ರೋಹಿತ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಗಾಯದಿಂದ ಚೇತರಿಸಿಕೊಂಡು ದೇಶೀಯ ಪಂದ್ಯಗಳಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡದಿದ್ದರೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ರೋಹಿತ್ ಬೆಂಬಲಿಸಿದ್ದಾರೆ. ಮೊಹಮ್ಮದ್ ಶಮಿ ಅವರಿಗೆ ಸರಣಿಯಲ್ಲಿ ಆಡಲು ಅವಕಾಶ ಸಿಕ್ಕರೆ ಅವರು ಏನು ಮಾಡಲು ಸಮರ್ಥರಾಗಿದ್ದಾರೆಂದು ನೋಡೋಣ. ನಾವು ಈಗ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಕರೆದುಕೊಂಡು ಹೋಗುತ್ತೇವೋ? ಇಲ್ಲವೋ? ಎಂಬುದರ ಬಗ್ಗೆ ಯೋಚಿಸುತ್ತಿಲ್ಲ. 'ಆದರೆ ನಮಗೆ ಎಲ್ಲವೂ ಚೆನ್ನಾಗಿ ನಡೆದರೆ ಮತ್ತು ಅವರು ಅಗತ್ಯವಿರುವುದನ್ನು ಮಾಡಿದರೆ ಅವರು ಸ್ಪರ್ಧೆಯಲ್ಲಿರುತ್ತಾರೆ.