ಅಫ್ಘಾನಿಸ್ತಾನ ವಿರುದ್ಧ ಭಾರತದಲ್ಲಿ ಟಿ-20 ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಗಾಯಗೊಂಡಿರುವ ಸೂರ್ಯ ಕುಮಾರ್ ಯಾದವ್ ಈ ಸರಣಿಯಲ್ಲಿ ಆಡುತ್ತಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸೂರ್ಯ ಕುಮಾರ್ ಪಾದದ ಗಾಯಕ್ಕೆ ತುತ್ತಾಗಿದ್ದರು. ಅಫ್ಘಾನಿಸ್ತಾನ ಸರಣಿಯಲ್ಲಿ ಅವರ ಗಾಯದಿಂದ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಸೂರ್ಯ ಕುಮಾರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ.
ಇದೇ ವೇಳೆ ಗಾಯದ ಸಮಸ್ಯೆಯಿಂದ ವಿಶ್ವಕಪ್‌ನಿಂದ ಹೊರಗುಳಿದಿದ್ದ ಹಾರ್ದಿಕ್ ಆಟದ ಬಗ್ಗೆ ಅನುಮಾನವಿದ್ದು, ಇಶಾನ್ ಕಿಶನ್ ಆಯ್ಕೆಗೆ ಲಭ್ಯರಿರುವುದಿಲ್ಲ.

ಅಫ್ಘಾನಿಸ್ತಾನ ವಿರುದ್ಧ ಮೂರು ಟಿ-20 ಪಂದ್ಯಗಳ ಸರಣಿ ನಡೆಯಲಿದೆ.
ಭಾರತ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಮೊದಲ ಟಿ-20 ಪಂದ್ಯ ಜನವರಿ 11 ರಂದು ಮೊಹಾಲಿಯಲ್ಲಿ ನಡೆಯಲಿದೆ. ಎರಡನೇ ಟಿ20 ಪಂದ್ಯ ಜನವರಿ 14 ರಂದು ಇಂದೋರ್‌ನಲ್ಲಿ ಮತ್ತು ಮೂರನೇ ಟಿ20 ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸೂರ್ಯ ಗಾಯಗೊಂಡಿದ್ದರು. ಹೀಗಾಗಿ ಅವರು ಮೈದಾನ ತೊರೆಯಬೇಕಾಯಿತು. ಉಪನಾಯಕ ರವೀಂದ್ರ ಜಡೇಜಾ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಈ ಪಂದ್ಯದಲ್ಲಿ ಸೂರ್ಯ ತಮ್ಮ ನಾಲ್ಕನೇ T-20 ಶತಕವನ್ನು ಗಳಿಸಿದರು. ಇದರಿಂದಾಗಿ ಭಾರತವು ಮೂರು ಪಂದ್ಯಗಳ T-20 ಸರಣಿಯನ್ನು ಸಮಬಲಗೊಳಿಸಿತು. ಮೊದಲ ಟಿ-20 ಪಂದ್ಯ ಮಳೆಯಿಂದಾಗಿ ಆಡಲು ಸಾಧ್ಯವಾಗಿರಲಿಲ್ಲ, ಆದರೆ ಎರಡನೇ ಟಿ20 ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತು.

ದಕ್ಷಿಣ ಆಫ್ರಿಕಾದಿಂದ ವಾಪಸಾದ ನಂತರ ಸೂರ್ಯ ಸ್ಕ್ಯಾನ್ ಮಾಡಿಸಿದ್ದು, ಅವರಿಗೆ ಪಾದದ ಗಾಯವಾಗಿದೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ ಮೊದಲ ವಾರಕ್ಕೆ ಸೂರ್ಯ ಫಿಟ್ ಆಗಲಿದ್ದಾರೆ. ಐಪಿಎಲ್‌ಗೂ ಮುನ್ನ ಫೆಬ್ರವರಿಯಲ್ಲಿ ನಡೆಯಲಿರುವ ದೇಶಿ ಟೂರ್ನಮೆಂಟ್ ರಣಜಿ ಟ್ರೋಫಿಯಲ್ಲಿ ಸೂರ್ಯ ಆಡುವ ಮೂಲಕ ಫಿಟ್‌ನೆಸ್ ಸಾಬೀತುಪಡಿಸುವ ನಿರೀಕ್ಷೆಯಿದೆ.
ಅಕ್ಟೋಬರ್ 19 ರಂದು ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಹಾರ್ದಿಕ್ ಗಾಯಗೊಂಡಿದ್ದರು. ಪಂದ್ಯದ 9 ನೇ ಓವರ್‌ನ ಮೂರನೇ ಎಸೆತದಲ್ಲಿ ಅವರ ಪಾದ ತಿರುಚಿತ್ತು. ಅವರು ಕ್ರೀಸ್‌ನಲ್ಲಿಯೇ ಕುಳಿತರು. ತೀವ್ರ ಗಾಯದಿಂದಾಗಿ ಅವರು ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಅವರ ಓವರ್ ಕೂಡ ವಿರಾಟ್ ಕೊಹ್ಲಿ ಪೂರ್ಣಗೊಳಿಸಿದರು.

ಅಫ್ಘಾನಿಸ್ತಾನ ವಿರುದ್ಧದ ತವರಿನಲ್ಲಿ ನಡೆಯುವ ಸರಣಿಯ ಮೊದಲು ಹಾರ್ದಿಕ್ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆದರೆ, ಅವರ ಗಾಯದ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ವೈಯುಕ್ತಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಧ್ಯದಲ್ಲೇ ತೊರೆದಿರುವ ವಿಕೆಟ್‌ಕೀಪರ್ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧದ ತವರಿನ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಇಶಾನ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ T-20 ಮತ್ತು ಟೆಸ್ಟ್ ತಂಡದ ಭಾಗವಾಗಿದ್ದರು.