ವಿಶ್ವಕಪ್ ಸನಿಹದಲ್ಲಿರುವಾಗ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಆರಂಭದಲ್ಲಿ ಮೊಹಮ್ಮದ್ ಶಮಿ ಅವರ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾ ಬ್ಯಾಟಿಂಗ್ ವಿಭಾಗದ ವಿರುದ್ಧ ಅದ್ಭುತ ಮೇಲುಗೈ ಸಾಧಿಸಿದ್ದ ಭಾರತ ಬಳಿಕ ಬ್ಯಾಟಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿತು. ಹೀಗಾಗಿ 5 ವಿಕೆಟ್‌ಗಳ ಅಂತರದ ಅದ್ಭುತ ಗೆಲುವು ಸಾಧಿಸಿದಂತಾಗಿದೆ.
ಮೊದಲಿಗೆ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡವನ್ನು ಭಾರತ 266 ರನ್‌ಗಳಿಗೆ ಕಟ್ಟು ಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಅದ್ಭುತ ಆರಂಬ ದೊರೆಯಿತು. ಯುವ ಆರಂಭಿಕ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ಋತುರಾಜ್ ಗಾಯಕ್ವಾಡ್ ಮೊದಲ ವಿಕೆಟ್‌ಗೆ ಭರ್ಜರಿ 142 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಋತುರಾಜ್ ಗಾಯಕ್ವಾಡ್ 71 ರನ್‌ಗಳಿಸಿದ್ದಾಗ ಆಡಂ ಜಂಪಾಗೆ ಎಲ್‌ಬಿಡಬ್ಲ್ಯು ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಇದರ ಬೆನ್ನಿಗೆ ಶ್ರೇಯಸ್ ಐಯ್ಯರ್ ರನೌಟ್ ಆಗುವ ಮೂಲಕ ಮತ್ತೊಂದು ಆಘಾತ ನೀಡಿದರು. ಬಳಿಕ 74 ರನ್‌ಗಳಿಸಿದ್ದ ಶುಬ್ಮನ್ ಗಿಲ್ ಕೂಡ ವಿಕೆಟ್ ಕಳೆದುಕೊಳ್ಳುವ ಮೂಲಕ 9 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ನಾಯಕ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಉತ್ತಮ ಇನ್ನಿಂಗ್ಸ್ ಕಟ್ಟುವತ್ತ ಹೆಜ್ಜೆ ಹಾಕಿತ್ತಿದ್ದಾರೆ ಎನ್ನುವಾಗ ಇಶಾನ್ ಕಿಶನ್ 18 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಅದಾದ ಬಳಿಕ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಜೊತೆಯಾಟವಾಡುವ ಮೂಲಕ ಭಾರತವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದರು. ಸುದೀರ್ಘ ಕಾಲದಿಂದ ಏಕದಿನ ಮಾದರಿಯಲ್ಲಿ ರನ್ ಬರ ಅನುಭವಿಸುತ್ತಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಅಮೋಘ ಆಟವನ್ನು ಪ್ರದರ್ಶಿಸುವ ಮೂಲಕ ತಾನು ಪಾರ್ಮ್ ಕಂಡುಕೊಂಡಿರುವುದನ್ನು ಸಾಬೀತುಪಡಿಸಿದರು. 49 ಎಸೆತಗಳಲ್ಲಿ 50 ರನ್‌ಗಳಿಸಿದ್ದಾಗ ಸೂರ್ಯ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿತು.
ಆದರೆ ಅದಾಗಲೇ ಟೀಮ್ ಇಂಡಿಯಾ ಗೆಲುವಿನ ಸನಿಹಕ್ಕೆ ತಲುಪಿತ್ತು. ಉಳಿದ ರನ್‌ಗಳನ್ನು ನಾಯಕ ಕೆಎಲ್ ರಾಹುಲ್ ರವೀಂದ್ರ ಜೊತೆಗೆ ಸೇರಿಕೊಂಡು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಇನ್ನೂ 8 ಎಸೆತಗಳು ಬಾಕಿಯಿರುವಂತೆಯೇ ಭಾರತ ಈ ಪಂದ್ಯದಲ್ಲಿ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿ ಆಸ್ಟ್ರೇಲಿಯಾ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಮೊದಲ ಓವರ್‌ನಲ್ಲಿಯೇ ಆರಂಭಿಕ ಆಟಗಾರ ಮಿಚೆಲ್ ಮಾರ್ಶ್ ಅವರನ್ನು ಔಟ್ ಮಾಡುವ ಮೂಲಕ ಶಮಿ ಭಾರತಕ್ಕೆ ಆರಂಭದಲ್ಲಿ ಮುನ್ನಡೆ ಒದಗಿಸಿದರು. ಆದರೆ ಅದಾದ ಬಳಿಕ ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಜೋಡಿ 94 ರನ್‌ಗಳ ಬೃಹತ್ ಜೊತೆಯಾಟ ನೀಡಿದರು. ಡೇವಿಡ್ ವಾರ್ನರ್ 52 ರನ್‌ಗಳಿಸಿ ಜಟೇಜಾಗೆ ವಿಕೆಟ್ ನೀಡುವ ಮೂಲಕ ಈ ಜೋಡಿ ಬೇರ್ಪಟ್ಟಿತ್ತು. ಅದಾದ ಬಳಿಕ ಸ್ಮಿತ್ ಕೂಡ 41 ರನ್‌ಗಳಿಗೆ ಔಟಾದರು.
ನಂತರ ಮಾರ್ನಸ್ ಲ್ಯಾಬುಶೇನ್ ಹಾಗೂ ಕ್ಯಾಮರೂನ್ ಗ್ರೀನ್ ಜೋಡಿ ಕೂಡ ಉತ್ತಮ ಪ್ರದರ್ಶನ ನೀಡಿದರು. ಲ್ಯಾಬುಶೇನ್ 39 ರನ್‌ಗಳಿಸಿ ವಿಕೆಟ್ ಕಳೆದುಕೊಂಡಿದ್ದು ಗ್ರೀನ್ 31 ರನ್‌ಗಳಿಸಿ ರನೌಟ್ ಆದರು. ನಂತರ ಜೋಶ್ ಇಂಗ್ಲಿಸ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಕೂಡ ಅರ್ಧ ಶತಕದ ಜೊತೆಯಾಟ ನೀಡಿ ಬೇರ್ಪಟ್ಟರು. ಇಂಗ್ಲಿಸ್ 45 ರನ್‌ಗಳಿಸಿದರೆ ಸ್ಟೋಯ್ನಿಸ್ 29 ರನ್‌ಗಳ ಕೊಡುಗೆ ನೀಡಿದರು. ಇನ್ನು ನಂತರ ನಾಯಕ ಪ್ಯಾಟ್ ಕಮ್ಮಿನ್ಸ್ 9 ಎಸೆತಗಳಲ್ಲಿ 21 ರನ್‌ಗಳಿಸುವ ಮೂಲಕ ತಂಡ 276 ರನ್‌ಗಳಿಸಲು ಕಾರಣವಾದರು.
ಇನ್ನು ಅನುಭವಿ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ತಮ್ಮ 10 ಓವರ್‌ಗಳ ಕೋಟಾದಲ್ಲಿ ಒಂದು ಮೇಡನ್ ಸಹಿತ 51 ರನ್‌ಗಳನ್ನು ನೀಡಿ 5 ವಿಕೆಟ್ ಕಬಳಿಸಿದರು. ಉಳಿದಂತೆ ಜಸ್ಪ್ರೀತ್ ಬೂಮ್ರಾ, ಆರ್ ಅಶ್ವಿನ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಇಬ್ಬರು ಆಸಿಸ್ ಆಟಗಾರರು ರನೌಟ್ ಆದರು.
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ & ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
ಬೆಂಚ್: ತಿಲಕ್ ವರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ
ಬೆಂಚ್: ಅಲೆಕ್ಸ್ ಕ್ಯಾರಿ, ಜೋಶ್ ಹ್ಯಾಜಲ್ವುಡ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ತನ್ವೀರ್ ಸಂಘ