ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಒಂಬತ್ತನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿ 19 ದಿನಗಳ ಕಾಲ ನಡೆಯಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತ ತಂಡ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಲಿದ್ದು, ಫೆಬ್ರವರಿ 23 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಎಲ್ಲರ ಕಣ್ಣು ಭಾರತ ತಂಡದ ಪಂದ್ಯಗಳ ಮೇಲೆ ನೆಟ್ಟಿದೆ. ಫೈನಲ್ ಪಂದ್ಯಕ್ಕೆ ಎರಡು ಸ್ಥಳಗಳನ್ನು ಇರಿಸಲಾಗಿದೆ.
ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಫೆಬ್ರವರಿ 23 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ದುಬೈ ಆತಿಥ್ಯ ವಹಿಸಲಿದೆ. ಟೀಮ್ ಇಂಡಿಯಾವನ್ನು ಹೊರತುಪಡಿಸಿ, ಇತರ ತಂಡಗಳೊಂದಿನ ಪಂದ್ಯಗಳನ್ನು ಪಾಕಿಸ್ತಾನ ತವರಿನಲ್ಲಿ ಮಾತ್ರ ಆಡಲಿದೆ.

ಚಾಂಪಿಯನ್ಸ್ ಟ್ರೋಫಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ನಡುವೆ ಬಹಳ ಸಮಯದಿಂದ ವಿವಾದವಿತ್ತು. ಬಿಸಿಸಿಐ ಟೀಮ್ ಇಂಡಿಯಾವನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ. ಚಾಂಪಿಯನ್ ಟ್ರೋಫಿ 2025ರ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂದು ಹಠ ಹಿಡಿತ್ತು. ಹೀಗಾಗಿ ಬಿಸಿಸಿಐ ಮತ್ತು ಪಿಸಿಬಿ ನಡುವೆ ಸಭೆ ನಡೆಸುವ ಮೂಲಕ ಐಸಿಸಿ ವಿವಾದಕ್ಕೆ ತೆರೆ ಮುಂದಾಗಿತ್ತು.
ಚಾಂಪಿಯನ್ ಟ್ರೋಫಿ 2025ರ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ನಿರ್ಧಾರವನ್ನು ಒಪ್ಪಿಕೊಳ್ಳಲು ಪಿಸಿಬಿ ಮೂರು ಷರತ್ತುಗಳನ್ನು ಐಸಿಸಿ ಮುಂದೆ ಇಟ್ಟಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ ಐಸಿಸಿ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ ಟ್ರೋಫಿಯನ್ನು ನಡೆಸುವುದಾಗಿ ಘೋಷಣೆ ಮಾಡಿತ್ತು. ಇದೀಗ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯುವುದರಿಂದ ಫೈನಲ್ ಮತ್ತು ಸೆಮಿಫೈನಲ್ ಎರಡಕ್ಕೂ ಮೀಸಲು ದಿನವನ್ನು ಇರಿಸಲಾಗಿದೆ. ಮಾರ್ಚ್ 9 ರಂದು ಫೈನಲ್ ಪಂದ್ಯ ನಡೆಯಲಿದ್ದು, ಮಾರ್ಚ್ 10 ಮೀಸಲು ದಿನವಾಗಿದೆ. ಫೈನಲ್‌ಗೆ ನಿಗದಿಯಾಗಿರುವ ಸ್ಥಳ ಲಾಹೋರ್. ಆದರೆ ಇದರೊಂದಿಗೆ ದುಬೈ ಕೂಡ ಫೈನಲ್ ಪಂದ್ಯ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಭಾರತ ಅರ್ಹತೆ ಪಡೆದರೆ, ಫೈನಲ್ ಪಂದ್ಯ ದುಬೈನಲ್ಲಿ ನಡೆಯಲಿದೆ.
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳಿದ್ದರೆ, ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ತಂಡಗಳಿವೆ. 2024ರ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ಮತ್ತೊಂದು ಐಸಿಸಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಫೆಬ್ರವರಿ 20 : ಭಾರತ vs ಬಾಂಗ್ಲಾದೇಶ : ದುಬೈ
ಫೆಬ್ರವರಿ23 : ಭಾರತ vs ಪಾಕಿಸ್ತಾನ : ದುಬೈ
ಮಾರ್ಚ್ 2 : ಭಾರತ vs ನ್ಯೂಜಿಲೆಂಡ್ : ದುಬೈ