ಟೆಸ್ಟ್ ಕ್ರಿಕೆಟ್‌ಗೆ ಉತ್ತೇಜನ ನೀಡಲು ಐಸಿಸಿ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಈ ಟೆಸ್ಟ್ ಕೆಲವೇ ದಿನಗಳಲ್ಲಿ ಭಾರೀ ಜನಮನ್ನಣೆಯನ್ನು ಗಳಿಸಿದೆ. ಭಾರತದಲ್ಲೂ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯ ನಡೆದಿದೆ. ಈ ಪಂದ್ಯವನ್ನು ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಆದರೆ, ಬಿಸಿಸಿಐ ತನ್ನ ದೇಶೀಯ ಋತುವಿನಲ್ಲಿ ಒಂದೇ ಒಂದು ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ನಿಗದಿಪಡಿಸಿಲ್ಲ. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಆಗಿದೆ.
ಭಾರತದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸದಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಈ ಟೆಸ್ಟ್ ಪಂದ್ಯಗಳು ಕೇವಲ 2-3 ದಿನಗಳಲ್ಲಿ ಮುಗಿಯುವ ಕಾರಣ, ಈ ಪಂದ್ಯಗಳತ್ತ ಅಭಿಮಾನಿಗಳ ಆಸಕ್ತಿ ಕಡಿಮೆ ಎಂದು ತಿಳಿಸಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ನೋಡುವ ಆಸಕ್ತಿಯನ್ನು ಹೆಚ್ಚಿಸಬೇಕಿದೆ. 4-5 ದಿನಗಳ ಕಾಲ ನಡೆಯುವ ಬದಲು, ಹಗಲು ರಾತ್ರಿ ಟೆಸ್ಟ್ ಪಂದ್ಯಗಳು ಕೇವಲ 2 ಅಥವಾ 3 ದಿನಗಳಲ್ಲಿ ಕೊನೆಗೊಳ್ಳುತ್ತವೆ. ಒಮ್ಮೆ ಅಭಿಮಾನಿಗಳು ಅಂತಹ ಪಂದ್ಯಗಳಿಗೆ ಒಗ್ಗಿಕೊಂಡರೆ, ನಾವು ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಕಳೆದ ಬಾರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿತ್ತು. ಅಂದಿನಿಂದ ಪಿಂಕ್ ಬೌಲ್ ಟೆಸ್ಟ್ ಪಂದ್ಯ ನಡೆದಿಲ್ಲ. ನಾವು ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡುತ್ತಿದ್ದೇವೆ ಮತ್ತು ನಾವು ಅದನ್ನು ಹಂತಹಂತವಾಗಿ ಜಾರಿಗೆ ತರುತ್ತೇವೆ ಎಂದು ಜಯ್ ಶಾ ಹೇಳಿದ್ದಾರೆ.
ಇಲ್ಲಿಯವರೆಗೆ ಭಾರತ ಕ್ರಿಕೆಟ್ ತಂಡವು ಕೇವಲ ನಾಲ್ಕು ಹಗಲು-ರಾತ್ರಿ ಅಂದರೆ ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದೆ. ಈ ಪೈಕಿ ಭಾರತ ಮೂರರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಟೀಂ ಇಂಡಿಯಾ ಇದುವರೆಗೆ ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಭಾರತವು ಇಂಗ್ಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದೆ, ಆದರೆ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿದೆ.
ಭಾರತ ತಂಡವು ಟೆಸ್ಟ್ ಸರಣಿಯನ್ನು ಆಡಲು ಕೊನೆಯ ಬಾರಿಗೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದಾಗ, ಆ ಸರಣಿಯ ಮೊದಲ ಪಂದ್ಯವನ್ನು ಅಡಿಲೇಡ್‌ನಲ್ಲಿ ಆಡಲಾಯಿತು. ಇದು ಹಗಲು-ರಾತ್ರಿ ಪಂದ್ಯವಾಗಿದ್ದು, ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಪಂದ್ಯದಲ್ಲಿ ಭಾರತ ಹೀನಾಯ ಸೋಲನ್ನು ಎದುರಿಸಬೇಕಾಯಿತು.

ಪಿಂಕ್ ಟೆಸ್ಟ್ ಪಂದ್ಯದ ಉಳಿದ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಅನ್ನು 10 ವಿಕೆಟ್‌ಗಳಿಂದ, ಶ್ರೀಲಂಕಾವನ್ನು 238 ರನ್‌ಗಳಿಂದ ಮತ್ತು ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಮತ್ತು 46 ರನ್‌ಗಳಿಂದ ಸೋಲಿಸಿದೆ.
ಇನ್ನು ಭಾರತ ಮಹಿಳಾ ತಂಡ ಕೇವಲ ಒಂದು ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿದ್ದು, ಇದು 2021 ರಲ್ಲಿ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿತ್ತು. ಆ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.