ಐಪಿಎಲ್ 2025 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಅತ್ಯಂತ ಕೆಟ್ಟ ಆರಂಭವನ್ನು ಹೊಂದಿತ್ತು. ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಸತತ ಎರಡು ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಮೂರನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಿತು. ಈ ಪಂದ್ಯದಲ್ಲಿ ಸಿಎಸ್‌ಕೆ ಮಣಿಸಿದ ಆರ್‍ಆರ್ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದ ಗೆಲುವಿನ ಹೀರೋ ನಿತೀಶ್ ರಾಣಾ ಸಿಎಸ್‌ಕೆ ಬೌಲರ್‍ಗಳಿಗೆ ಬೆವರಿಳಿಸಿದರು. ಕಳೆದ ಎರಡು ಸೀಸನ್‌ಗಳಿಂದ ಸ್ವಲ್ಪ ಸೈಲೆಂಟ್ ಆಗಿದ್ದ ರಾಣಾ ಭಾನುವಾರ ರಾತ್ರಿ ಗುವಾಹಟಿಯಲ್ಲಿ ಮಿಂಚಿದರು.
ಸಿಎಸ್‌ಕೆ ವಿರುದ್ಧ ನಿತೀಶ್ ರಾಣಾ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದು ಅಚ್ಚರಿ ಮೂಡಿಸಿದರು. ಏಕೆಂದರೆ ಅವರು ಸಾಮಾನ್ಯವಾಗಿ 5 ಅಥವಾ 6 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಸಿಎಸ್‌ಕೆ ವಿರುದ್ಧ ರಾಣಾ ಅವರ ಬ್ಯಾಟಿಂಗ್ ಪ್ರದರ್ಶನ ಮೂರನೇ ಕ್ರಮಾಂಕವನ್ನು ಭದ್ರಪಡಿಸಿಕೊಳ್ಳುವುದಾಗಿತ್ತು. ಗೆಲುವಿನ ನಂತರ ನಿತೀಶ್ ರಾಣಾ ಮೂರನೇ ಕ್ರಮಾಂಕದಲ್ಲಿ ಆಡುವುದು ಯಾರ ನಿರ್ಧಾರ ಎಂಬ ರಹಸ್ಯ ಬಹಿರಂಗವಾಯಿತು.

ನಿತೀಶ್ ರಾಣಾ ಇದುವರೆಗೆ ಐಪಿಎಲ್‌ನಲ್ಲಿ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಅವರು ಸ್ಫೋಟಕ ಇನ್ನಿಂಗ್ಸ್ ಆಡಿದರು. ರಾಣಾ ಕೇವಲ 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 81 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಿಂದಾಗಿ, ರಾಜಸ್ಥಾನ ತಂಡವು 182 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಆದರೆ ಅವರನ್ನು 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸುವ ನಿರ್ಧಾರ ನಾಯಕನದ್ದಾಗಿರಲಿಲ್ಲ. ಪಂದ್ಯದ ನಂತರ ರಾಣಾ ಸ್ವತಃ ಈ ರಹಸ್ಯವನ್ನು ಬಹಿರಂಗಪಡಿಸಿದರು.
ಸಿಎಸ್‌ಕೆ ವಿರುದ್ಧದ ಗೆಲುವಿನ ನಂತರ ಮಾತನಾಡಿದ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬ್ಯಾಟರ್ ನಿತೀಶ್ ರಾಣಾ, "ಪವರ್ ಪ್ಲೇ ಮುಖ್ಯವಾಗಿದ್ದರಿಂದ ನಾನು ಹೊಸ ಚೆಂಡನ್ನು ಸರಿಯಾಗಿ ಬಳಸಲು ಬಯಸಿದ್ದೆ. ಚೆಂಡು ಹಳೆಯದಾಗುತ್ತಿದ್ದಂತೆ ತಿರುಗಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ನಾನು ಪವರ್‌ಪ್ಲೇನಲ್ಲಿ ಸಾಧ್ಯವಾದಷ್ಟು ಗರಿಷ್ಠ ರನ್ ಗಳಿಸಬೇಕು ಅಂದುಕೊಂಡಿದ್ದೆ. ಇದು ಹೆಡ್‌ಕೋಚ್ ರಾಹುಲ್ ದ್ರಾವಿಡ್ ಅವರ ನಿರ್ಧಾರವಾಗಿತ್ತು. ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ. ಇದು ಒಂದು ಕಾರ್ಯತಂತ್ರದ ನಿರ್ಧಾರವಾಗಿತ್ತು. ಏಕೆಂದರೆ ನಾಲ್ಕನೇ ಸ್ಥಾನದಲ್ಲಿ ನಾನು ಅತಿಯಾಗಿ ಆಕ್ರಮಣಕಾರಿಯಾಗಿರಲು ಪ್ರಯತ್ನಿಸುತ್ತಿದ್ದೆ ಮತ್ತು ಮೂರನೇ ಸ್ಥಾನದಲ್ಲಿ ರಿಯಾನ್ ಕೂಡ ಅದನ್ನೇ ಮಾಡುತ್ತಿದ್ದರು ಎಂದು ತಾವು ಮಿಂಚಲು 3ನೇ ಸ್ಥಾನ ಕಾರಣ ಎಂಬುದನ್ನು ಹೇಳಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ ರಾಜಸ್ಥಾನ 6 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.