ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಭಾಗವಹಿಸುವ ಎಲ್ಲಾ ಹತ್ತು ತಂಡಗಳು ತಮ್ಮ ಅತ್ಯುತ್ತಮ ಸಂಯೋಜನೆಯನ್ನು ನಿರ್ಮಿಸುತ್ತಿವೆ.
ಈಗಾಗಲೇ ಆತಿಥೇಯ ಭಾರತ ಸೇರಿದಂತೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ವಿಶ್ವಕಪ್ ಪಂದ್ಯಾವಳಿಗೆ ತಮ್ಮ 15 ಸದಸ್ಯರ ತಂಡಗಳನ್ನು ಪ್ರಕಟಿಸಿವೆ.
ಇನ್ನು ತವರಿನಲ್ಲೇ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಗೆಲ್ಲಲು ಭಾರತ ತಂಡಕ್ಕೆ ಉತ್ತಮ ಅವಕಾಶವಿದೆ ಎಂದು ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಎಕ್ಸ್ (ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿ, ಭಾರತವು ತವರಿನಲ್ಲಿ ಆಡುತ್ತಿರುವುದು ಪ್ರಶಸ್ತಿಯನ್ನು ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.
ಇದೇ ವೇಳೆ ಕಳೆದ 3 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆತಿಥೇಯ ತಂಡವೇ ಪಂದ್ಯಾವಳಿಯನ್ನು ಗೆದ್ದಿರುವುದು ಭಾರತಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಎಕ್ಸ್ (ಟ್ವಿಟ್ಟರ್)ನಲ್ಲಿ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಪೋಸ್ಟ್‌ಗೆ ವೀರೇಂದ್ರ ಸೆಹ್ವಾಗ್ ಪ್ರತ್ಯುತ್ತರ ನೀಡಿದರು. ಟೀಮ್ ಇಂಡಿಯಾದಲ್ಲಿ ವಿಷಯಗಳನ್ನು ತಿರುಗಿಸಲು ಮತ್ತು ವಿಶ್ವಕಪ್ ಎತ್ತುವಷ್ಟು ಸಾಮರ್ಥ್ಯ ಅವರಲ್ಲಿ ಇದೆಯೇ ಎಂದು ಅಭಿಮಾನಿಗಳನ್ನು ಕೇಳಿದರು.

ಯುವರಾಜ್ ಸಿಂಗ್ ಪೋಸ್ಟ್ ಮಾಡಿ, "ನಾವೆಲ್ಲರೂ 2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ 2011ರ ಪುನರಾವರ್ತನೆಯನ್ನು ಬಯಸುತ್ತೇವೆ. ಆದರೆ 2011ರಲ್ಲಿ ಭಾರತ ತಂಡ ಒತ್ತಡದಲ್ಲಿ ಮಿಂಚಿತು," ಎಂದು ಬರೆದುಕೊಂಡಿದ್ದಾರೆ.
2023ರಲ್ಲಿ ಮತ್ತೆ ಭಾರತ ತಂಡವು ಪ್ರದರ್ಶನ ನೀಡುವ ಒತ್ತಡದಲ್ಲಿದೆ. ಇದನ್ನು ತಿರುಗಿಸಲು ನಮಗೆ ಅಷ್ಟು ಸಮಯವಿದೆಯೇ? ನಾವು "ಗೇಮ್ ಚೇಂಜರ್' ಆಗಲು ಈ ಒತ್ತಡವನ್ನು ಬಳಸಬಹುದೇ? ಇದಕ್ಕೆ ಉತ್ತರಿಸಿದ ವೀರೇಂದ್ರ ಸೆಹ್ವಾಗ್, "2011ರ ವಿಶ್ವಕಪ್ ನಾವು ತವರಿನಲ್ಲಿ ಗೆದ್ದಿದ್ದೇವೆ, ಆಸ್ಟ್ರೇಲಿಯಾದಲ್ಲಿ ನಡೆದ 2015ರ ವಿಶ್ವಕಪ್ ಆಸ್ಟ್ರೇಲಿಯಾ ಗೆದ್ದಿದೆ, ಇಂಗ್ಲೆಂಡ್‌ನಲ್ಲಿ ನಡೆದ 2019ರ ವಿಶ್ವಕಪ್ ಇಂಗ್ಲೆಂಡ್ ಗೆದ್ದಿದೆ, 2023ರಲ್ಲಿ ಭಾರತವೇ ಗೆಲ್ಲಲಿದೆ," ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಈ ಸಂಭಾಷಣೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ. ಆತಿಥೇಯ ಕಾತಣದಿಂದ ಮಾತ್ರ ಭಾರತವನ್ನು ಪಂದ್ಯಾವಳಿಯನ್ನು ಗೆಲ್ಲುವ ನೆಚ್ಚಿನ ತಂಡವನ್ನಾಗಿ ಮಾಡುತ್ತದೆ ಎಂಬ ವೀರೇಂದ್ರ ಸೆಹ್ವಾಗ್ ಮಾತಿಗೆ ಒಪ್ಪಿಗೆ ನೀಡಲು ಗಂಗೂಲಿ ನಿರಾಕರಿಸಿದ್ದಾರೆ.

"ಭಾರತದಲ್ಲಿ ವಿಶ್ವಕಪ್ ನಡೆಯುವುದರಿಂದ ಮತ್ತು ನಾವು ಸಾಮರ್ಥ್ಯ ಮತ್ತು ಆತ್ಮವಿಶ್ವಾಸದಿಂದ ಆಡುತ್ತಿರುವ ಕಾರಣ, ಭಾರತ ತಂಡ ಫೇವರಿಟ್ ಆಗಿದೆ," ಎಂದು ಸೌರವ್ ಗಂಗೂಲಿ ಉತ್ತರಿಸಿದ್ದಾರೆ.
"ವೀರೇಂದ್ರ ಸೆಹ್ವಾಗ್, ಹೌದು ನಾವು ಆಸ್ಟ್ರೇಲಿಯಾದಲ್ಲಿ ಅವರ ವಿರುದ್ಧ ಗೆದ್ದಿದ್ದೇವೆ, ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಡ್ರಾ ಮಾಡಿಕೊಂಡಿದ್ದೇವೆ. ಆದರೆ ನಂತರ ದೊಡ್ಡ ಪಂದ್ಯಗಳಲ್ಲಿ ನಾವು ಎರಡು ತಂಡಗಳ ವಿರುದ್ಧ ಸೋತಿದ್ದೇವೆ. ನಾವು ಅತ್ಯುತ್ತಮ ತಂಡವನ್ನು ಹೊಂದಿದ್ದೇವೆ ಮತ್ತು ದೊಡ್ಡ ಅವಕಾಶವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ, 2023ರ ವಿಶ್ವಕಪ್‌ಗಿಂತ ಮೊದಲು ನಾವು ನಮ್ಮ ಗೆಲುವಿನ ಹಾದಿಗೆ ಮರಳಬೇಕಾಗಿದೆ," ಎಂದಿದ್ದಾರೆ.
ಭಾರತ ತಂಡ ತನ್ನ 2023ರ ಏಕದಿನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭಿಸಲಿದೆ. ಅಕ್ಟೋಬರ್ 5ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಇನ್ನು ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ.
ಸೆಪ್ಟೆಂಬರ್ 5ರಂದು ಬಿಸಿಸಿಐನ ಆಯ್ಕೆ ಸಮಿತಿಯು ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಿತು. ರೋಹಿತ್ ಶರ್ಮ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕನಾಗಿದ್ದಾರೆ. ಗಾಯಗೊಂಡು ಚೇತರಿಸಿಕೊಂಡಿರುವ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಮತ್ತೆ ತಂಡಕ್ಕೆ ವಾಪಸ್ಸಾಗಿದ್ದಾರೆ.