For Quick Alerts
ALLOW NOTIFICATIONS  
For Daily Alerts
 

IND vs BAN: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ವಿರಾಟ್ ಕೊಹ್ಲಿಗೆ ವಿಶೇಷವೇಕೆ?

ಆಗಸ್ಟ್ 10 ಭಾನುವಾರ, ಶ್ರೀಲಂಕಾ ಪ್ರವಾಸ ಮುಗಿಸಿರುವ ಟೀಮ್ ಇಂಡಿಯಾ ಇದೀಗ ಮೈದಾನಕ್ಕಿಳಿಯಲು ಒಂದೂವರೆ ತಿಂಗಳಿಗಿಂತ ಹೆಚ್ಚು ಕಾಲ ಕಾಯಬೇಕಾಗಿದೆ. ವಿರಾಮದ ನಂತರ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟೀಮ್ ಇಂಡಿಯಾ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲಿದೆ.

ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ಗೆದ್ದುಕೊಂಡಿದ್ದರೂ, ಏಕದಿನದಲ್ಲಿ ಸೋಲನ್ನು ಎದುರಿಸಬೇಕಾಯಿತು. ಆತಿಥೇಯ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು. ಮೊದಲ ಪಂದ್ಯ ಟೈ ಆಗಿತ್ತು.

Why Test series against Bangladesh is special for Virat Kohli

ರಾಹುಲ್ ದ್ರಾವಿಡ್ ಬಳಿಕ ಕೋಚ್ ಆದ ಗೌತಮ್ ಗಂಭೀರ್ ಮೊದಲ ಬಾರಿಗೆ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಗಂಭೀರ್ ಟಿ20ಯಲ್ಲಿ ಯಶಸ್ಸು ಕಂಡರೂ ಏಕದಿನದಲ್ಲಿ ನಿರಾಸೆ ಅನುಭವಿಸಿದರು.

ಇನ್ನು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕುತೂಹಲ ಹೆಚ್ಚಿಸಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 23 ರವರೆಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ.

ಬಾಂಗ್ಲಾದೇಶ ವಿರುದ್ಧದ ಸರಣಿಗೆ ಇನ್ನೂ ಒಂದು ತಿಂಗಳಿಗಿಂತ ಹೆಚ್ಚು ಸಮಯವಿದ್ದರೂ ಇದರ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದಲ್ಲದೆ, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಈ ಸರಣಿ ವಿಶೇಷವಾಗಲಿದೆ. ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಮಾಡುವ ಅವಕಾಶವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೊಹ್ಲಿ ಬ್ರಾಡ್ಮನ್ ಮೀರಿಸುವರೇ?

ವಿರಾಟ್ ಕೊಹ್ಲಿ 113 ಟೆಸ್ಟ್ ಪಂದ್ಯಗಳ 191 ಇನ್ನಿಂಗ್ಸ್‌ಗಳಿಂದ 49.15 ಸರಾಸರಿಯಲ್ಲಿ 8848 ರನ್ ಗಳಿಸಿದ್ದಾರೆ. 29 ಶತಕ ಹಾಗೂ 30 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಇದೀಗ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟರ್ ಡಾನ್ ಬ್ರಾಡ್‌ಮನ್‌ರನ್ನು ಕೊಹ್ಲಿ ಮೀರಿಸುವ ಸಾಧ್ಯತೆಯಿದೆ.

ಬ್ರಾಡ್ಮನ್ 52 ಟೆಸ್ಟ್ ಪಂದ್ಯಗಳಿಂದ 99.94 ಸರಾಸರಿಯಲ್ಲಿ 6996 ರನ್ ಬಾರಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 29 ಶತಕಗಳನ್ನು ಸಿಡಿಸಿದ್ದಾರೆ. ಇದೀಗ ಬ್ರಾಡ್ಮನ್ ಅವರನ್ನು ಕೊಹ್ಲಿ ಹಿಂದಿಕ್ಕಲು ಕೇವಲ ಒಂದೇ ಒಂದು ಟೆಸ್ಟ್ ಶತಕದ ಅಗತ್ಯವಿದೆ.

ಅವರು ಈ ಸಾಧನೆ ಮಾಡಿದರೆ, ಅತಿ ಹೆಚ್ಚು ಟೆಸ್ಟ್ ಶತಕಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಮತ್ತು ವೆಸ್ಟ್ ಇಂಡೀಸ್‌ನ ಶಿವನಾರಾಯಣ್ ಚಂದ್ರಪಾಲ್ ಅವರನ್ನು ಸರಿಗಟ್ಟಲಿದ್ದಾರೆ. ಹೇಡನ್ ಮತ್ತು ಚಂದ್ರಪಾಲ್ ಅವರ ಹೆಸರಿನಲ್ಲಿ 30 ಶತಕಗಳಿವೆ.

ಗಂಭೀರ್ ಹಿಂದಿಕ್ಕಲಿರುವ ಕೊಹ್ಲಿ

ವಿರಾಟ್ ಬಾಂಗ್ಲಾದೇಶ ವಿರುದ್ಧ 6 ಟೆಸ್ಟ್ ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 54.62 ಸರಾಸರಿಯಲ್ಲಿ 437 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 2 ಶತಕಗಳನ್ನು ಹೊಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟರ್‌ಗಳ ಪೈಕಿ ಕೊಹ್ಲಿ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಇವರೊಂದಿಗೆ ಹಾಲಿ ಕೋಚ್ ಗೌತಮ್ ಗಂಭೀರ್ ಹಾಗೂ ಮಾಜಿ ಆರಂಭಿಕ ಆಟಗಾರ ಮುರಳಿ ವಿಜಯ್ ಕೂಡ ಬಾಂಗ್ಲಾದೇಶ ವಿರುದ್ಧ ತಲಾ 2 ಶತಕ ಸಿಡಿಸಿದ್ದಾರೆ. ಕೊಹ್ಲಿ ಒಂದು ಶತಕ ಬಾರಿಸಿದರೆ ಈ ಇಬ್ಬರನ್ನೂ ಬಿಟ್ಟು ಮುಂದೆ ಹೋಗಲಿದ್ದಾರೆ. ಇದಲ್ಲದೇ ಅವರು ದ್ರಾವಿಡ್‌ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ರಾಹುಲ್ ದ್ರಾವಿಡ್ 3 ಶತಕ ಸಿಡಿಸಿದ್ದು, ಸಚಿನ್ ತೆಂಡೂಲ್ಕರ್ 5 ಶತಕಗಳೊಂದಿಗೆ ಆಗ್ರಸ್ಥಾನದಲ್ಲಿದ್ದಾರೆ.

ಜೊತೆಗೆ ಬಾಂಗ್ಲಾದೇಶ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳ ಪೈಕಿ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 6 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 437 ರನ್ ಗಳಿಸಿದ್ದಾರೆ. ಅವರಿಗಿಂತ ಮುಂದೆ ಅನುಭವಿ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ (468 ರನ್), ರಾಹುಲ್ ದ್ರಾವಿಡ್ (560 ರನ್) ಮತ್ತು ಸಚಿನ್ ತೆಂಡೂಲ್ಕರ್ (820 ರನ್) ಇದ್ದಾರೆ.

ವಿರಾಟ್ 32 ರನ್ ಗಳಿಸಿದರೆ ಪೂಜಾರ ಮತ್ತು 124 ರನ್ ಗಳಿಸಿದರೆ ದ್ರಾವಿಡ್ ಅವರನ್ನು ಹಿಂದಿಕ್ಕಲಿದ್ದಾರೆ. ತೆಂಡೂಲ್ಕರ್ ಅವರಿಗಿಂತ ಮುಂದೆ ಹೋಗಲು 384 ರನ್ ಗಳ ಅವಶ್ಯಕತೆಯಿದೆ.

Story first published: Sunday, August 11, 2024, 17:06 [IST]
Other articles published on Aug 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+