ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಅಮೋಘ ಶತಕದ ಕಾರಣ ಭಾರೀ ಮುನ್ನಡೆ ಪಡೆದುಕೊಂಡಿರುವ ಭಾರತ ಪಂದ್ಯವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತಗೆದುಕೊಂಡಿದೆ. ಇನ್ನಿ ಎರಡನೇ ದಿನದಾಟದಲ್ಲಿ ಟೀಮ್ ಇಮಡಿಯಾ ಪರವಾಗಿ ಬ್ಯಾಟಿಂಗ್‌ಗೆ ಇಳಿದಿರುವ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಹೊಸ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಭಾರತದ ಪರವಾಗಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ವಿರೇಂದ್ರ ಸೆಹ್ವಾಗ್ ಅವರನ್ನು ಹಿಂದಿಕ್ಕಿರುವ ಕೊಹ್ಲಿ ಈ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಈವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 8,515 ರನ್‌ಗಳನ್ನು ಗಳಿಸಿದ್ದು ಮುನ್ನುಗ್ಗುತ್ತಿದ್ದಾರೆ.

2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಈ ಸುದೀರ್ಘ ಪ್ರಯಾಣದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆಕ್ರಮಣಕಾರಿ ಆಟದ ಶೈಲಿಯಲ್ಲಿ ತಮ್ಮ ಅದ್ಭುತ ತಾಂತ್ರಿಕ ಕೌಶಲ್ಯದೊಂದಿಗೆ ದೇಶ ಹಾಗೂ ವಿದೇಶಿ ನೆಲದಲ್ಲಿಯೂ ಸಾಕಷ್ಟು ರನ್‌ಗಳನ್ನು ಹರಿಸಿರುವ ಕೊಹ್ಲಿ ಇತ್ತೀಚಿನ ವರ್ಷಗಳಲ್ಲಿ ಮಂಕಾಗಿದ್ದರೂ ಮತ್ತೆ ಅದ್ಭುತ ಲಯಕ್ಕೆ ಮರಳುವ ಭರವಸೆ ಮೂಡಿಸಿದ್ದಾರೆ.
ದೆಹಲಿ ಮೂಲದ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಈಗ ಭಾರತೀಯ ಕ್ರಿಕೆಟ್‌ನ ಕೆಲ ಶ್ರೇಷ್ಠ ಆಟಗಾರರ ಎಲೈಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಟೆಸ್ಟ್ ವೃತ್ತಿಜೀವನದಲ್ಲಿ 15,921 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಅದಾದ ಬಳಿಕ ರಾಹುಲ್ ದ್ರಾವಿಡ್ 13,265 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಮೊದಲ ಆಟಗಾರ ಸುನಿಲ್ ಗವಾಸ್ಕರ್ 10,122 ರನ್‌ಗಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ತಮ್ಮ ಸೊಗಸಾದ ಸ್ಟ್ರೋಕ್ ಆಟಕ್ಕೆ ಹೆಸರಾದ ವಿವಿಎಸ್ ಲಕ್ಷ್ಮಣ್ 8,781 ರನ್‌ಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಎರಡನೇ ದಿನದಾಟದ ಅಂತ್ಯದ ವೇಳೆಗೆ ವಿರಾಟ್ 96 ಎಸೆತಗಳನ್ನು ಎದುರಿಸಿದ್ದು 36 ರನ್‌ಗಳನ್ನು ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ರೇಮನ್ ರೈಫರ್, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್
ಬೆಂಚ್: ಕಿರ್ಕ್ ಮೆಕೆಂಜಿ, ಶಾನನ್ ಗೇಬ್ರಿಯಲ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್
ಬೆಂಚ್: ಋತುರಾಜ್ ಗಾಯಕ್ವಾಡ್, ಶ್ರೀಕರ್ ಭರತ್, ಅಕ್ಷರ್ ಪಟೇಲ್, ನವದೀಪ್ ಸೈನಿ, ಮುಖೇಶ್ ಕುಮಾರ್