
ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಗೆ ಭರ್ಜರಿಯಾಗಿ ಸಿದ್ಧತೆ ನಡೆಸಿದೆ. ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕೂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಟೀಮ್ ಇಂಡಿಯಾ ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದು ವಿಶ್ವಕಪ್ ಗೆಲ್ಲುವ ಅತ್ಯಂತ ನೆಚ್ಚಿನ ತಂಡ ಎನಿಸಿಕೊಂಡಿದೆ.
ವಿಶ್ವಕಪ್ ಟೂರ್ನಿಯ ಸನಿಹದಲ್ಲಿರುವಾಗ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಅದ್ಭುತ ಲಯದಲ್ಲಿರುವುದು ಸ್ಪಷ್ಟವಾಗಿದೆ. ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಎಲ್ಲಾ ಆಟಗಾರರು ಕೂಡ ಅದ್ಭುತ ಲಯದಲ್ಲಿ ಇರುವುದನ್ನು ತಮ್ಮ ಇತ್ತೀಚಿನ ಪ್ರದರ್ಶನಗಳ ಮೂಲಕ ಖಚಿತಪಡಿಸಿದ್ದಾರೆ.
ಇಷ್ಟೆಲ್ಲಾ ಸಕಾರಾತ್ಮಕ ವಿಚಾರಗಳ ಹೊರತಾಗಿಯೂ ಭಾರತ ನಿರಾಳವಾಗುವಂತಿಲ್ಲ. ತಂಡದಲ್ಲಿ ಹೊಸದೊಂದು ಚಿಂತೆ ಕಾರಣವಾಗಿದೆ. ಅದುವೇ ವಿಕೆಟ್ ಕೀಪಿಂಗ್. ರಿಷಬ್ ಪಂತ್ ಅಲಭ್ಯತೆಯ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ತಂಡದ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ತನ್ನ ಉತ್ತಮ ಪ್ರದರ್ಶನವನ್ನು ರಾಹುಲ್ ನೀಡುವ ಮೂಲಕ ತಂಡದ ಬಲವನ್ನು ಹೆಚ್ಚಿಸಿದರೂ ಕೂಡ ವಿಕೆಟ್ ಹಿಂದೆ ಅವರ ಪ್ರದರ್ಶನ ಉತ್ತಮವಾಗಿಲ್ಲ.
ಆಸಿಸ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಅಭಿಮಾನಿಗಳಲ್ಲಿ ಹೊಸ ಕಳವಳಕ್ಕೆ ಕಾರಣವಾಗಿದೆ. ಕೆಲ ಸುಲಭ ಅವಕಾಶಗಳನ್ನು ರಾಹುಲ್ ಕೈಚೆಲ್ಲಿದ್ದು ಇದು ವಿಶ್ವಕಪ್‌ನಂಥಾ ಟೂರ್ನಿಯಲ್ಲಿ ತಂಡಕ್ಕೆ ಹಿನ್ನಡೆಯುಂಟು ಮಾಡುವ ಆತಂಕ ಮೂಡಿಸಿದೆ. ಹೀಗಾಗಿ ವಿಕೆಟ್ ಕೀಪಿಂಗ್ ಈಗ ಹೊಸ ಕಳವಳಕ್ಕೆ ಕಾರಣವಾಗಿರುವ ವಿಭಾಗವಾಗಿದೆ.
ಇನ್ನು ತಂಡದಲ್ಲಿ ವಿಕೆಟ್ ಕೀಪಿಂಗ್‌ಗೆ ಮತ್ತೊಂದು ಆಯ್ಕೆಯೆಂದರೆ ಅದು ಇಶಾನ್ ಕಿಶನ್. ಆದರೆ ಸೂರ್ಯಕುಮಾರ್ ಯಾದವ್ ಕೂಡ ಲಯಕ್ಕೆ ಮರಳಿರುವ ಕಾರಣ ತಂಡದ ಸಮತೋಲದ ದೃಷ್ಟಿಯಿಂದ ಇಶಾನ್ ಆಡುವ ಬಳಗಕ್ಕೆ ಸೇರ್ಪಡೆ ಮತ್ತಷ್ಟು ಸವಾಲಾಗುವ ಸಾಧ್ಯತೆಯೂ ಇದೆ. ಅಲ್ಲದೆ ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಇಶಾನ್ ಕೂಡ ಪರಿಣಾಮಕಾರಿ ವಿಕೆಟ್ ಕೀಪರ್ ಎನಿಸಿಕೊಳ್ಳುವುದು ಕಷ್ಟಕರವಾಗಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿದೆ.