ಆಗಸ್ಟ್ 20 ಮಂಗಳವಾರ, ಆಧುನಿಕ ಕ್ರಿಕೆಟ್‌ನಲ್ಲಿ ಆಟಗಾರರಿಗೆ ಅವರ ವಯಸ್ಸಿನ ಆಧಾರದ ಮೇಲೆ ಆಡಲು ಆದ್ಯತೆ ನೀಡುವುದಿಲ್ಲ. 40ರ ಹರೆಯಕ್ಕೆ ಬರುವ ಮುನ್ನವೇ ದಿಗ್ಗಜ ಆಟಗಾರರು ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸುದ್ದಿಗಳು ಹೆಚ್ಚುತ್ತಿವೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರು ಇದಕ್ಕೆ ದೊಡ್ಡ ಉದಾಹರಣೆ. ಇದಕ್ಕೂ ಮುಂಚೆ ಆಟಗಾರರು ಕ್ರಿಕೆಟ್ ಬಗ್ಗೆ ಅಪಾರ ಒಲವು ತೋರುತ್ತಿದ್ದ ಕಾಲವೊಂದಿತ್ತು. ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವು 24 ವರ್ಷಗಳ ಕಾಲ ನಡೆಯಿತು.

ಇದಕ್ಕಾಗಿಯೇ ಸಚಿನ್ ಅಭಿಮಾನಿಗಳು ಅವರಿಗೆ 'ಕ್ರಿಕೆಟ್ ದೇವರು' ಎಂದು ಕರೆಯಲು ಶುರು ಮಾಡಿದರು. ಆದರೆ ಸಚಿನ್ ಅವರಿಗಿಂತಲೂ 30 ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ ಆಟಗಾರರೊಬ್ಬರು ಇದ್ದಾರೆ. ಇಂಗ್ಲೆಂಡ್‌ನ ಈ ಸ್ಟಾರ್ ಆಲ್‌ರೌಂಡರ್ ಯಾರು? ಅಂದಿನ ಕಾಲದಲ್ಲಿ ಇವರು ಮಾಡಿದ ದಾಖಲೆಗಳ ಏನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂಗ್ಲೆಂಡ್ ಮೂಲದ ವಿಲ್ಫ್ರೆಡ್ ರೋಡ್ಸ್ ಕಥೆ ತುಂಬಾ ಆಸಕ್ತಿದಾಯಕವಾಗಿದೆ. ಅಕ್ಟೋಬರ್ 29, 1877 ರಂದು ವಿಲ್ಫ್ರೆಡ್ ರೋಡ್ಸ್ ಜನಿಸಿದರು. 1899 ರಲ್ಲಿ ಅಂದರೆ ತಮ್ಮ 22 ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಅವರು ಸ್ಪಿನ್ ಆಲ್ ರೌಂಡರ್ ಆಗಿದ್ದರು.
ಪ್ರಥಮ ದರ್ಜೆ ಕ್ರಿಕೆಟ್ ವಿಲ್ಫ್ರೆಡ್ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ಪರ 30 ವರ್ಷ 315 ದಿನಗಳು ವಿಲ್ಫ್ರೆಡ್ ಕ್ರಿಕೆಟ್ ಆಡಿದರು. ಆದರೆ ಅಂತಹ ಸುದೀರ್ಘ ವೃತ್ತಿಜೀವನದ ಹೊರತಾಗಿಯೂ, ಅವರು ತಂಡಕ್ಕಾಗಿ ಕೇವಲ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 2325 ರನ್ ಗಳಿಸಿ 127 ವಿಕೆಟ್ ಪಡೆದಿದ್ದಾರೆ.
ಈ ಮೂಲಕ ವಿಲ್ಫ್ರೆಡ್ ಸುದೀರ್ಘ ಅಂತರಾಷ್ಟ್ರೀಯ ವೃತ್ತಿಜೀವನದ ದಾಖಲೆಯನ್ನು ಹೊಂದಿದ್ದಾರೆ. ಈ ದಾಖಲೆಯನ್ನು ಇಲ್ಲಿವರೆಗೂ ಯಾವ ಆಟಗಾರನಿಂದಲ್ಲೂ ಮುರಿಯಲು ಸಾಧ್ಯವಾಗಿಲ್ಲ. ಅವರು ಅಂತರರಾಷ್ಟ್ರೀಯ ವೃತ್ತಿಜೀವನಕ್ಕಿಂತ ಹೆಚ್ಚಾಗಿ, ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದರು.
ವಿಲ್ಫ್ರೆಡ್ 1898 ರಿಂದ 1930 ರವರೆಗೆ ಒಟ್ಟು 1110 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದು ಇಂದಿಗೂ ಬ್ರೇಕ್ ಮಾಡಲು ಸಾಧ್ಯವಾಗದ ರೆಕಾರ್ಡ್ ಆಗಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 4204 ವಿಕೆಟ್ ಪಡೆದಿದ್ದು, 39969 ರನ್ ಗಳಿಸಿದ್ದಾರೆ. ಈ ಅಂಕಿ ಅಂಶಗಳು ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಇಂದಿಗೂ ದಾಖಲಾಗಿರುವುದು ವಿಶೇಷವಾಗಿದೆ.
ವಿಲ್ಫ್ರೆಡ್ 52ರ ವಯಸ್ಸಿನವರಾಗಿದ್ದರೂ, ಅವರಿಗೆ ಕ್ರಿಕೆಟ್ ಮೇಲೆ ಇದ್ದ ಉತ್ಸಾಹ ಕಡಿಮೆ ಆಗಿರಲಿಲ್ಲ. ಈ ವಯಸ್ಸಿನಲ್ಲಿ ಇಂಗ್ಲೆಂಡ್ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಈ ದಾಖಲೆಯೂ ವಿಶ್ವಕ್ರಿಕೆಟ್‌ನಲ್ಲಿ ಹಲವು ವರ್ಷಗಳಿಂದ ಮುರಿಯದೆ ಉಳಿದಿದೆ. ವಿಲ್ಫ್ರೆಡ್ ರೋಡ್ಸ್ 1973 ರಲ್ಲಿ ತಮ್ಮ 95ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಕ್ರಿಕೆಟ್ ಮೈದಾನದಲ್ಲಿ ಅವರ ಸೃಷ್ಟಿಸಿದ ದಾಖಲೆಗಳು ಇನ್ನೂ ಜೀವಂತವಾಗಿವೆ.