Gundappa Viswanath: ಸ್ವಾರ್ಥ ಮೆರೆತು ಸ್ಪೂರ್ತಿಯಾದ 'ಸ್ಕ್ವೇರ್ ಕಟ್ ವಿಶಿ', ಕ್ರಿಕೆಟ್‌ಗೆ ಇನ್ನೊಬ್ಬ ಜಿಆರ್‌ವಿ ಬರಲು ಸಾಧ್ಯವೇ
ಆರ್ಥಿಕವಾಗಿ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಬಿಸಿಸಿಐ (The Board of Control for Cricket in India). ದೇಶದ 130 ಕೋಟಿ ಜನರ ಜೊತೆ ಕ್ರಿಕೆಟ್ ಅನ್ನುವುದು ಪಾರ್ಟ್ ಆಫ್ ಲೈಫ್ ಆಗಿ ಹೋಗಿದೆ. ಕಾಂಚಾಣದ ಹೊಳೆಯನ್ನೇ ಹರಿಸುವ ಈ ಆಟ ನಮ್ಮ ದೇಶದ ಇತರ ಕ್ರೀಡೆಗಳನ್ನು ಸದ್ಯಕ್ಕಂತೂ ಮೂಲೆಗೆ ತಳ್ಳಿದಂತೂ ಹೌದು.
ಅಂತರಾಷ್ಟ್ರೀಯ ಕ್ರಿಕೆಟ್ ಆರಂಭವಾದ ನಂತರ ಭಾರತದ ರಾಷ್ಟ್ರೀಯ ತಂಡವನ್ನು ರಾಜ್ಯದ ಹಲವಾರು ಮಹಾನ್ ಪ್ರತಿಭೆಗಳು ಪ್ರತಿನಿಧಿಸಿದ್ದಾರೆ. ಎಪ್ಪತ್ತರ ದಶಕದ ಬಿ.ಎಸ್.ಚಂದ್ರಶೇಖರ್, ಗುಂಡಪ್ಪ ವಿಶ್ವನಾಥ್ ಅವರಿಂದ ಹಿಡಿದು ಈಗಿನ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ವರೆಗೆ ಇಂಡಿಯಾ ಟೀಂ ಅನ್ನು ಪ್ರತಿನಿಧಿಸಿದ ಪ್ರಮುಖ ಆಟಗಾರರ ಬಗೆಗಿನ ಸರಣಿ ಮಾಹಿತಿಯ ಲೇಖನವನ್ನು ಆರಂಭಿಸುತ್ತಿದ್ದೇವೆ. ಮೊದಲಿಗೆ 'ಸ್ಕ್ವೇರ್ ಕಟ್ ವಿಶಿ' ಎಂದೇ ಹೆಸರಾಗಿರುವ ಗುಂಡಪ್ಪ ವಿಶ್ವನಾಥ್ ಅಥವಾ ಜಿ.ಆರ್. ವಿಶ್ವನಾಥ್ ಅವರಿಂದ..

12 ಫೆಬ್ರವರಿ 1949ರಲ್ಲಿ ಭದ್ರಾವತಿಯಲ್ಲಿ ಜನಿಸಿದ ಗುಂಡಪ್ಪ ರಂಗನಾಥ್ ವಿಶ್ವನಾಥ್, 1978ರಲ್ಲಿ ಭಾರತ ಕಂಡ ಮತ್ತೋರ್ವ ಖ್ಯಾತ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಸಹೋದರಿ ಕವಿತಾ ಅವರನ್ನು ವಿವಾಹವಾದರು. ದೈವಿಕ್ ಎನ್ನುವ ಮಗನ ಜೊತೆಗೆ ವಿಶಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. 1983ರಲ್ಲಿ ಕ್ರಿಕೆಟಿಂದ ರಿಟೈರ್ಡ್ ಆದ ಮೇಲೆ ಐಸಿಸಿ ರೆಫ್ರಿ ಆಗಿಯೂ ಕೆಲಸ ನಿರ್ವಹಿಸಿದ್ದರು.
ರಾಷ್ಟ್ರೀಯ ಆಯ್ಕೆ ಸಮಿತಿಯಾಗಿ ಅಧ್ಯಕ್ಷರಾಗಿ, ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಕೋಚ್ ಆಗಿ ಮತ್ತು ಕರ್ನಾಟಕ ಕ್ರಿಕೆಟ್ ಅಸೋಶಿಯೇಸನ್ ಉಪಾಧ್ಯಕ್ಷರಾಗಿಯೂ ವಿಶ್ವನಾಥ್ ಸೇವೆ ಸಲ್ಲಿಸಿದ್ದರು. ಹೋದ ವರ್ಷ ಅವರ ಆಟೋಬಯಾಗ್ರಫಿ 'Wrist Assured' ಅನ್ನು ಮಾಜಿ ನಾಯಕ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಅನಾವರಣಗೊಳಿಸಿದ್ದರು.

ಕ್ರೀಡಾ ಸ್ಪೂರ್ತಿ ಮೆರೆಯುವುದರಲ್ಲಿ ಗುಂಡಪ್ಪ ವಿಶ್ವನಾಥ್ ಹೆಸರುವಾಸಿ
ತಮ್ಮ ವೃತ್ತಿ ಜೀವನದುದ್ದಕ್ಕೂ ಕ್ರೀಡಾ ಸ್ಪೂರ್ತಿ ಮೆರೆಯುವುದರಲ್ಲಿ ಹೆಸರುವಾಸಿಯಾಗಿದ್ದ ಗುಂಡಪ್ಪ ವಿಶ್ವನಾಥ್ ಇದೇ ವಿಚಾರದಲ್ಲಿ ಕಟು ಟೀಕೆಗೂ ಒಳಗಾಗಿದ್ದುಂಟು. ಒಂದು ಉದಾಹರಣೆ, ಮುಂಬೈನ ವಾಖೇಂಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು. ಇಂಗ್ಲೆಂಡ್ ಆಟಗಾರ ಬಾಬ್ ಟೇಲರ್ ಅವರನ್ನು ಅಂಪೈರ್ ಔಟ್ ಎಂದು ತಪ್ಪು ತೀರ್ಪು ನೀಡಿದ್ದರು. ಆ ವೇಳೆ, ನಾಯಕರಾಗಿದ್ದ ವಿಶ್ವನಾಥ್ ಅವರು ಟೇಲರ್ ಅವರನ್ನು ವಾಪಸ್ ಕರೆಸಿಕೊಂಡರು ಮತ್ತು ಟೇಲರ್ ಇಂಗ್ಲೆಂಡ್ ತಂಡಕ್ಕೆ ಗೆಲುವನ್ನು ತಂದು ಕೊಟ್ಟಿದ್ದರು. ವಿಶ್ವನಾಥ್ ಅವರ ಆ ನಿರ್ಧಾರ ಪ್ರಶಂಶೆಗೂ ಒಳಗಾಗಿತ್ತು ಮತ್ತು ಟೀಕೆಗೂ ಗುರಿಯಾಗಿತ್ತು.
ವಿಶಿಯವರ ಸ್ಕ್ವೇರ್ ಕಟ್ ಗೆ ಮನಸೋಲದವರೇ ಇಲ್ಲ
ನಾಯಕನಿಗಿಂತ ಹೆಚ್ಚಾಗಿ ಬ್ಯಾಟ್ಸಮ್ಯಾನ್ ಆಗಿ ಹೆಸರು ಪಡೆದಿದ್ದ ವಿಶ್ವನಾಥ್, ಅಂದಿನ ಭಯಾನಕ ಬೌಲರ್ ಗಳಾದ ಆಂಡಿ ರಾಬರ್ಟ್ಸ್, ಮೈಕಲ್ ಹೋಲ್ಡಿಂಗ್, ಡೆನಿಸ್ ಲಿಲ್ಲಿ, ಜೆಫ್ ಥಾಮ್ಸನ್, ಫೆಡ್ರಿಕ್ಸ್, ಸರ್ಫ್ರಾಜ್ ನವಾಜ್ ಮುಂತಾದ ಬೌಲರ್ ಅನ್ನು ನಿರಾಯಾಸವಾಗಿ ಎದುರಿಸಿದ್ದರು. ಅಂದಿನ ಕಾಲದ ಕ್ರಿಕೆಟ್ ಅಭಿಮಾನಿಗಳು ಮತ್ತು ಆಟಗಾರರು ಕೂಡ ವಿಶಿಯವರ ಸ್ಕ್ವೇರ್ ಕಟ್ ಗೆ ಮನಸೋಲದವರೇ ಇಲ್ಲ. ಎಷ್ಟೋ ಬಾರಿ, ವೇಗವಾಗಿ ಬರುವ ಚೆಂಡನ್ನು ಅಷ್ಟೇ ವೇಗವಾಗಿ ಬೌಂಡರಿಗೆ ಅಟ್ಟುವಾಗ ಎದುರಾಳಿ ಬೌಲರ್ ಗಳು ಪ್ರಶಂಸೆ ನೀಡಿದ್ದುಂಟು.. ನಿಟ್ಟುಸಿರು ಬಿಟ್ಟಿದ್ದುಂಟು..
ಜಿಆರ್ ಅವರ ಬ್ಯಾಟಿಂಗ್ ನೈಪುಣ್ಯತೆ
95 ಟೆಸ್ಟ್ ( 6,080 ರನ್) ಮತ್ತು 25 ಏಕದಿನ (439 ರನ್) ಪಂದ್ಯವನ್ನು ಆಡಿರುವ ವಿಶ್ವನಾಥ್, ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕಗಳಿಸಿದರೆ, ಇನ್ನೊಂದು ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. 1970ರ ದಶಕದ ಮಧ್ಯ ಭಾಗದಲ್ಲಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದ ಜಿಆರ್ ಅವರ ಬ್ಯಾಟಿಂಗ್ ನೈಪುಣ್ಯತೆಯ ಬಗ್ಗೆ ಒಂದು ಪಂದ್ಯವನ್ನು ಅವರ ಅಭಿಮಾನಿಗಳು ನೆನಪಿಸಿಕೊಳ್ಳದೇ ಇರುವುದಿಲ್ಲ.
ಚಿಪಾಕ್ ಚಿದಂಬರಂ ಮೈದಾನ
1974-75ರಲ್ಲಿ ಮದರಾಸಿನ (ಈಗಿನ ಚೆನ್ನೈ) ಚಿಪಾಕ್ ಚಿದಂಬರಂ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 190 ರನ್ನಿಗೆ ಆಲೌಟ್ ಆಗಿತ್ತು, ವೆಸ್ಟ್ ಇಂಡೀಸ್ 192 ರನ್ನಿಗೆ, ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 256ರನ್ನಿಗೆ ಆಲೌಟ್ ಆಗಿತ್ತು. ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 254ರನ್ ಅವಶ್ಯಕತೆಯಿತ್ತು. ಆದರೆ, ಕ್ಯಾರಬೀಯನ್ ಗಳು 154 ರನ್ನಿಗೆ ಆಲೌಟ್ ಆಗಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಪರ ವಿಶ್ವನಾಥ್ 228 ಬಾಲ್ ನಲ್ಲಿ 97 ರನ್ ಹೊಡೆದಿದ್ದರು. ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯರೊಬ್ಬರ ಅತ್ಯುತ್ತಮ ಪ್ರದರ್ಶನ ಇದೆಂದು ವಿಶ್ವನಾಥ್ ಅವರ ಆಟ ಇಂದಿಗೂ ಪರಿಗಣಿಸಲ್ಪಡುತ್ತದೆ.
ವಿಶ್ವನಾಥ್ ಬಾಬಾ ಕೀ ಜೈ ಎನ್ನುವ ಘೋಷಣೆ
ಅದೇ ರೀತಿ ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ದ ಎರಡನೇ ಇನ್ನಿಂಗ್ಸ್ ನಲ್ಲಿ ಮ್ಯಾಚ್ ಡ್ರಾ ಮಾಡಿದ ಶತಕ ಕೂಡಾ ವಿಶ್ವನಾಥ್ ಅವರ ನೆನಪಿನಲ್ಲಿ ಉಳಿಯುವ ಇನ್ನಿಂಗ್ಸ್ ಗಳು. ಅಂದು ಕ್ರಿಕ್ಕಿರಿದು ತುಂಬಿದ್ದ ಪ್ರೇಕ್ಷಕರು 'ವಿಶ್ವನಾಥ್ ಬಾಬಾ ಕೀ ಜೈ' ಎನ್ನುವ ಘೋಷಣೆಯನ್ನು ಕೂಗಿದ್ದರು. ಕುಮಾರ್ ಬಂಗಾರಪ್ಪ ಅಭಿನಯದ ನವತಾರೆ, ಅನಂತನಾಗ್ ಅಭಿನಯದ ಮಕ್ಕಳೇ ದೇವರು ಚಿತ್ರದಲ್ಲಿ ಜಿ.ಆರ್.ವಿಶ್ವನಾಥ್ ಅತಿಥಿ ಪಾತ್ರದಲ್ಲಿ ನಟಿಸಿದ್ದರೂ ಕೂಡಾ.. ನೂರು ಗವಾಸ್ಕರ್ ಬರಬಹುದು, ಆದರೆ ಇನ್ನೊಬ್ಬ ವಿಶ್ವನಾಥ್ ಬರಲು ಸಾಧ್ಯವೇ ಎನ್ನುವ ಮಾತು ಅಂದು ಜನನಿತವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications