2024ರ ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ತಂಡವನ್ನು ಹೊರಹಾಕುತ್ತಾ ಭಾರತ?; ಏಕದಿನ ವಿಶ್ವಕಪ್ ಸೋಲಿಗೆ ಸೇಡು?
ಸೋಮವಾರ, ಜೂನ್ 24ರಂದು ಸೇಂಟ್ ಲೂಸಿಯಾದ ಡೇರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಹೃದಯ ವಿದ್ರಾವಕ ಸೋಲಿನ ಎಂಟು ತಿಂಗಳ ನಂತರ ಭಾರತ ತಂಡವು ಆಸ್ಟ್ರೇಲಿಯಾ ತಂಡದ ವಿರುದ್ಧ ಮತ್ತೆ ಐಸಿಸಿ ಪಂದ್ಯಾವಳಿಯಲ್ಲಿ ಮುಖಾಮುಖಿಯಾಗುತ್ತಿದೆ. ಇದೇ ವೇಳೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಸೋಲು ಭಾರತೀಯ ತಂಡದ ಮನಸ್ಸಿನಲ್ಲಿ ಪ್ರತೀಕಾರ ತೀರಿಸಿಕೊಳ್ಳುವ ಮನೋಭಾವ ಇಲ್ಲದಿರದು.

2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಭಯ ತಂಡಗಳು ಕಣ್ಣಿಟ್ಟಿರುವುದರಿಂದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಎದುರಾಗಲಿವೆ.
2024ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಅಜೇಯ ಓಟವು ಅಫ್ಘಾನಿಸ್ತಾನ ತಂಡದಿಂದ ಆಘಾತಕಾರಿ ಸೋಲಿನಿಂದ ಕೊನೆಗೊಂಡಿತು. ಆಸ್ಟ್ರೇಲಿಯಾ ವಿರುದ್ಧ ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆಲುವು ದಾಖಲಿಸಿದ ರಶೀದ್ ಖಾನ್ ನೇತೃತ್ವದ ತಂಡ ಇತಿಹಾಸ ಬರೆದಿದೆ.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ ಭಾರತ ತಂಡ ಸೆಮಿಫೈನಲ್ ತಲುಪುತ್ತಿತ್ತು. ಆದರೆ, ಆಸ್ಟ್ರೇಲಿಯಾ ತಂಡದ ಸೋಲು ಗ್ರೂಪ್ 1ರ ಎಲ್ಲಾ ನಾಲ್ಕು ತಂಡಗಳಿಗೆ 2024ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಲು ಗೇಟ್‌ಗಳನ್ನು ತೆರೆದಿದೆ.
ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಿರುವುದರಿಂದ 2024ರ ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ತಂಡವನ್ನು ಹೊರಹಾಕಲು ಭಾರತ ತಂಡಕ್ಕೆ ಉತ್ತಮ ಅವಕಾಶವಿದೆ.
ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಬಹುದೇ?
ಭಾರತ ತಂಡ ಆಸ್ಟ್ರೇಲಿಯಾ ಸೋಲಿಸಿದರೆ ಮತ್ತು ಅಫ್ಘಾನಿಸ್ತಾನವು ಬಾಂಗ್ಲಾದೇಶ ತಂಡವನ್ನು ಸೋಲಿಸಿದರೆ, ಆಸೀಸ್ ತಂಡ 2024ರ ಟಿ20 ವಿಶ್ವಕಪ್‌ನಿಂದ ಪಂದ್ಯಾವಳಿಯಿಂದ ಹೊರಬೀಳಲಿದೆ.
ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಸೋತರೆ ಮತ್ತು ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಸೂಪರ್ 8ರ ಪಂದ್ಯವು ರದ್ದಾದರೆ, ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ತಂಡ 4 ಪಂದ್ಯಗಳಿಂದ 3 ಅಂಕಗಳನ್ನು ಸಂಗ್ರಹಿಸುವ ಮೂಲಕ ಸೆಮಿಫೈನಲ್ ತಲುಪುತ್ತದೆ.
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ, 6 ಅಂಕಗಳನ್ನು ಪಡೆಯುತ್ತದೆ ಮತ್ತು ಗ್ರೂಪ್ 1ರ ಅಂಕಪಟ್ಟಿಯ ಟಾಪರ್‌ಗಳಾಗಿ ಮುಗಿಸುತ್ತಾರೆ.
ಆಸ್ಟ್ರೇಲಿಯ ತಂಡವು ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಭಾರತ ತಂಡದ ಭವಿಷ್ಯವು ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿರುವುದರಿಂದ ಸೆಮಿಫೈನಲ್ ಅರ್ಹತೆಯನ್ನು ಖಚಿತಪಡಿಸಲಾಗುವುದಿಲ್ಲ.

ಆಸ್ಟ್ರೇಲಿಯಾ ತಂಡ ಗೆದ್ದರೆ ಮುಂದೇನು?
ಒಂದು ವೇಳೆ ಬಾಂಗ್ಲಾದೇಶ ತಂಡವು ಅಫ್ಘಾನಿಸ್ತಾನ ತಂಡವನ್ನು ಸೋಲಿಸಿ, ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಗೆದ್ದರೆ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ಗೇರಲಿವೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಹೊರಬೀಳಲಿವೆ.
ಇನ್ನು ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶ ತಂಡವನ್ನು ಸೋಲಿಸಿ, ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಗೆದ್ದರೆ, ಆಗ ನೆಟ್ ರನ್-ರೇಟ್ ಮುನ್ನೆಲೆಗೆ ಬರುತ್ತದೆ. ಮೂರು ತಂಡಗಳು ಸ್ಪರ್ಧೆಯಲ್ಲಿರಲಿವೆ.
ಪಂದ್ಯಾವಳಿಯ ನಿಯಮಗಳ ಪ್ರಕಾರ, ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೆಮಿಫೈನಲ್ ತಲುಪುತ್ತವೆ. ಇಲ್ಲಿಯವರೆಗೆ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತ ತಂಡ ತನ್ನ ಗೆಲುವಿನ ನಾಗಾಲೋಟವನ್ನು ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.
ಐಸಿಸಿ ಪಂದ್ಯಾವಳಿಯಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಯಾಗಿರುವ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್ ಸ್ಪರ್ಧೆಯಿಂದ ಹೊರದಬ್ಬಲು ಭಾರತ ತಂಡಕ್ಕೆ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications