ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟಿ20 ಪಂದ್ಯಗಳ ಸರಣಿಯ ಮೂರನೇ ಪಂದ್ಯ ಇಂದು (ಮಂಗಳವಾರ) ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಗೆದ್ದಿರುವ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ ಟೀಮ್ ಇಂಡಿಯಾ ಸರಣಿಯನ್ನು 3-0 ಅಂತರದಲ್ಲಿ ಮುನ್ನಡೆ ಸಾಧಿಸುವತ್ತ ಕಣ್ಣಿಟ್ಟಿದೆ. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಟಿ20 ಪಂದ್ಯಕ್ಕಾಗಿ ಆಡುವ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಎಲ್ಲರ ದೃಷ್ಟಿ ವೇಗದ ಬೌಲರ್ ಮೊಹಮ್ಮದ್ ಶಮಿ ಮೇಲಿದೆ.
ಮೊಹಮ್ಮದ್ ಶಮಿ ನವೆಂಬರ್ 2023ರ ನಂತರ ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಮೊದಲೆರಡುಟಿ20 ಪಂದ್ಯಗಳಲ್ಲಿ ಶಮಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಅವರು ಮೂರನೇ ಟಿ20 ಪಂದ್ಯದಲ್ಲಿ ಆಡುತ್ತಾರೋ? ಇಲ್ಲವೋ? ಎಂಬ ಪ್ರಶ್ನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಹೊರಗುಳಿದಿದ್ದರು. ಈಗ ಅವರು ಮೂರನೇ ಪಂದ್ಯದಲ್ಲೂ ಆಡುವ ಸಾಧ್ಯತೆ ಕಡಿಮೆ ಇದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಶಮಿ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಅವರು ಮೈದಾನಕ್ಕೆ ಬಾರದಿರುವುದು ಅಭಿಮಾನಿಗಳ ಚಿಂತೆಯನ್ನು ಹೆಚ್ಚಿಸುತ್ತಿದೆ. ಒಂದು ವೇಳೆ ಫಿಟ್ನೆಸ್ ಸಾಬೀತು ಪಡಿಸಲು ಅವಕಾಶ ಸಿಗದಿದ್ದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಾಗಬಹುದು.
ಚೆನ್ನೈನಲ್ಲಿ ನಡೆದ ಎರಡನೇ ಟಿ20ಯಲ್ಲಿ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆ ಮಾಡಿದ್ದು, ಮೂರನೇ ಪಂದ್ಯಕ್ಕೂ ಭಾರತ ಎರಡು ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಆಡಿದರೂ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅವರ ಜಾಗದಲ್ಲಿ ಶಿವಂ ದುಬೆ ಅಥವಾ ರಮಣದೀಪ್ ಸಿಂಗ್ ಅವರಿಗೆ ಅವಕಾಶ ನೀಡಬಹುದು. ಶನಿವಾರ, ನಿತೀಶ್ ಕುಮಾರ್ ರೆಡ್ಡಿ ಅವರು ಸಂಪೂರ್ಣ ಸರಣಿಯಿಂದ ಹೊರಗುಳಿದ ನಂತರ ಶಿವಂ ದುಬೆ ಮತ್ತು ರಮಣದೀಪ್ ಸಿಂಗ್ ಅವರನ್ನು ಭಾರತದ ಟಿ20 ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬೆನ್ನು ನೋವಿನಿಂದ ರಿಂಕು ಸಿಂಗ್ ಅವರು ಎರಡನೇ ಮತ್ತು ಮೂರನೇ ಟಿ20 ನಿಂದ ಹೊರಗುಳಿದಿದ್ದರು.
ನವೆಂಬರ್ 2024 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ರಮಣದೀಪ್ ಆಡಿದ್ದರೆ, ದುಬೆ ಕೊನೆಯ ಬಾರಿಗೆ ಭಾರತ ಪರ ಜುಲೈ 30, 2024 ರಂದು ಪಲ್ಲೆಕೆಲೆಯಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಈಗ ಮೂರನೇ ಟಿ20 ಪಂದ್ಯದಲ್ಲಿ ದುಬೆ ಮತ್ತು ರಮಣದೀಪ್ ಇಬ್ಬರನ್ನೂ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ. ಆದರೆ, ಇವರ ಬದಲಿಗೆ ರವಿ ಬಿಷ್ಣೋಯ್ ಅಥವಾ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಕೈ ಬಿಡಬಹುದು.
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರಮಣದೀಪ್ ಸಿಂಗ್/ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ.