ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ಅಭಿಮಾನಿಗಳ ಜೊತೆಗೆ ಕ್ರಿಕೆಟ್ ಪಂಡಿತರು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದಿನ ತಿಂಗಳು ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎಲ್ಲರ ದೃಷ್ಟಿ ವಿರಾಟ್ ಕೊಹ್ಲಿ ಮೇಲಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅದ್ಭತ ರೆಕಾರ್ಡ್ ಹೊಂದಿದ್ದಾರೆ. ಅವರು 54.08 ಸರಾಸರಿಯಲ್ಲಿ 1300 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಇತ್ತೀಚೆಗಿನ ಅವರ ಪ್ರದರ್ಶನವನ್ನು ಗಮನಿಸಿದರೆ ಕೊಹ್ಲಿ ತಮ್ಮ ಹಳೆ ಖದರ ಕಳೆದುಕೊಂಡಂತೆ ಕಾಣಿಸುತ್ತಿದೆ. ಇದೀಗ ಮಾಜಿ ಬಿಸಿಸಿಐ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಅವರ ಕೊಹ್ಲಿಯ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೂ ಅವರು ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅವರ ಫಾರ್ಮ್ ಬಗ್ಗೆ ಎಂಎಸ್‌ಕೆ ಪ್ರಸಾದ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು. ಆದರೆ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಚೇತೇಶ್ವರ ಪೂಜಾರ ಅವರನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಕೊಹ್ಲಿ ಮತ್ತು ಪೂಜಾರ ಜೋಡಿಯ ಬಗ್ಗೆ ಎಂಎಸ್‌ಕೆ ಪ್ರಸಾದ್ ಅವರನ್ನು ಪ್ರಶ್ನೆ ಕೇಳಿದಾಗ, 2018ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಮತ್ತು ಪೂಜಾರ ಅವರ ಪ್ರದರ್ಶನ ಅದ್ಭುತವಾಗಿತ್ತು. ಒಂದೆಡೆ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ಚೇತೇಶ್ವರ ಪೂಜಾರ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. ಆಕ್ರಮಣಕಾರಿ ಆಟದೊಂದಿಗೆ ಎಚ್ಚರಿಕೆ ಆಟವು ಮುಖ್ಯ. ಹೀಗಾಗಿ ನಾವು ಆ ಜೋಡಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಚೇತೇಶ್ವರ ಪೂಜಾರ ಭಾರತದ ಪರ ಸಾಕಷ್ಟು ಅದ್ಭತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು 25 ಟೆಸ್ಟ್ ಪಂದ್ಯಗಳಲ್ಲಿ 49.38 ಸರಾಸರಿಯಲ್ಲಿ 2074 ರನ್ ಗಳಿಸಿದ್ದಾರೆ. ಅವರು ಅದ್ಭುತ ಇನ್ನಿಂಗ್ಸ್‌ನಲ್ಲಿ 5 ಶತಕ ಮತ್ತು 11 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ಮತ್ತೊಂದೆಡೆ ವಿರಾಟ್ ಕೊಹ್ಲಿ ಕಳೆದ 10 ಇನ್ನಿಂಗ್ಸ್‌ಗಳಲ್ಲಿ 245 ರನ್ ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಫಾರ್ಮ್‌ಗೆ ಮರಳುವುದು ಪ್ರಮುಖವಾಗಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲಲು ಭಾರತಕ್ಕೆ ಕೊಹ್ಲಿ ಫಾರ್ಮ್ ನಿರ್ಣಾಯಕವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶಗಳು ಭಾರತ ತಂಡಕ್ಕೆ ಹೆಚ್ಚಿವೆ.
ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಮುಂದಿನ ವರ್ಷ ಇಂಗ್ಲೆಂಡ್‌ನ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಡಬ್ಲ್ಯೂಟಿಸಿ ಫೈನಲ್‌ಗೆ ಪ್ರವೇಶಿಸಲು ಭಾರತ ಉಳಿದಿರುವ 6 ಟೆಸ್ಟ್ ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಬೇಕು. ಈ ಪೈಕಿ 5 ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಒಂದು ಪಂದ್ಯ ನ್ಯೂಜಿಲೆಂಡ್ ವಿರುದ್ಧ ಮುಂಬೈನಲ್ಲಿ ನಡೆಯಲಿದೆ. ಈ ಪಂದ್ಯಗಳಲ್ಲಿ ಕೊಹ್ಲಿ ಫಾರ್ಮ್‌ಗೆ ಮರಳುವುದನ್ನು ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ.