ಗುವಾಹಟಿಯು ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಣ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೊದಲ ಬ್ಯಾಟಿಂಗ್ ಮಾಡಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 319 ರನ್ ಸೇರಿಸಿತು. ಈ ವೇಳೆ ನಾಯಕಿ ಲಾರಾ ವೊಲ್ವಾರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು. ಈ ಮೂಲಕ ಲಾರಾ ವೊಲ್ವಾರ್ಡ್ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯನ್ನು ಬರೆದರು.
ದಕ್ಷಿಣ ಆಫ್ರಿಕಾದ ನಾಯಕಿ ಇಂಗ್ಲೆಂಡ್ ವಿರುದ್ಧ ಮಹತ್ವದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಇವರು 143 ಎಸೆತಗಳಲ್ಲಿ 20 ಬೌಂಡರಿ, 4 ಸಿಕ್ಸರ್ ಸಹಾಯದಿಂದ 169 ರನ್ ಬಾರಿಸಿ ಮಿಂಚಿದರು. ಈ ಶತಕದ ಇನಿಂಗ್ಸ್ ನೆರವಿನಿಂದ ಲಾರಾ ವೊಲ್ವಾರ್ಡ್ ಹೊಸ ದಾಖಲೆಯನ್ನು ಬರೆದರು. ದಕ್ಷಿಣ ಆಫ್ರಿಕಾ ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಐದು ಸಾವಿರ ರನ್ ಪೂರೈಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಅಲ್ಲದೆ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಕಿರಿಯ ಆಟಗಾರ್ತಿ ಎಂಬ ಹಿರಿಮೆ ಅವರದ್ದಾಗಿದೆ.

ಲಾರಾ ವೊಲ್ವಾರ್ಡ್ 5000 ರನ್ ಬಾರಿಸುತ್ತಿದ್ದಂತೆ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಸ್ಮೃತಿ ಮಂಧಾನ 112 ಇನಿಂಗ್ಸ್‌ಗಳಲ್ಲಿ 5000 ರನ್ ಕಲೆ ಹಾಕಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಲಾರಾ ವೊಲ್ವಾರ್ಡ್ ಅವರಿಗೆ ಎರಡನೇ ಸ್ಥಾನ ಲಭಿಸಿದೆ.
ಲಾರಾ ವೊಲ್ವಾರ್ಡ್ ಎಸೆತಗಳ ವಿಚಾರದಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಮೂರನೇ ಆಟಗಾರ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಡಿದ್ದಾರೆ. ಈ ಪಟ್ಟಿಯಲ್ಲೂ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮೊದಲ ಸ್ಥಾನದಲ್ಲಿದ್ದಾರೆ. ಇವರು ಈ ಸಾಧನೆ ಮಾಡಲು 5569 ತೆಗೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಸೂಜಿ ಬೆಟ್ಸ್ ಇದ್ದು ಇವರು 6182 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಲಾರಾ ಈ ಮೈಲಿಗಲ್ಲು ತಲುಪಲು 6832 ಎಸೆತಗಳನ್ನು ತೆಗೆದುಕೊಂಡಿದ್ದಾರೆ.
ಮಿಥಾಲಿ ರಾಜ್, ಭಾರತ, 7805 ರನ್
ಷಾರ್ಲೆಟ್ ಎಡ್ವರ್ಡ್ಸ್, ಇಂಗ್ಲೆಂಡ್, 5992 ರನ್
ಸೂಜಿ ಬೇಟ್ಸ್, ನ್ಯೂಜಿಲೆಂಡ್, 5936 ರನ್
ಸ್ಟೆಫನಿ ಟೇಲರ್ ವೆಸ್ಟ್ ಇಂಡೀಸ್, 5873 ರನ್
ಸ್ಮೃತಿ ಮಂಧಾನ, ಭಾರತ, 5253 ರನ್
ಲಾರಾ ವೊಲ್ವಾರ್ಡ್, ದಕ್ಷಿಣ ಆಫ್ರಿಕಾ, 5121 ರನ್
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 125 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಏಕದಿನ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದಿದೆ. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಫೈನಲ್‌ಗೆ ಪ್ರವೇಶಿಸಿದೆ. ಇನ್ನು 320 ರನ್‌ಗಳ ಗುರಿಯನ್ನು ಬೆನ್ನಟಿದ ಇಂಗ್ಲೆಂಡ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗಾರ್ತಿಯರಾದ ನ್ಯಾಟ್ ಸ್ಕಿವರ್ ಬ್ರಂಟ್ 64, ಆಲಿಸ್ ಕ್ಯಾಪ್ಸಿ 50 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ದಕ್ಷಿಣ ಆಫ್ರಿಕಾ ತಂಡದ ಪರ ಮರಿಜಾನ್ನೆ ಕಪ್ಪ್ 5 ವಿಕೆಟ್ ಪಡೆದು ಮಿಂಚಿದರು.