
ಮ್ಯಾಂಚೆಸ್ಟರ್, ಆಗಸ್ಟ್ 4: ಭಾರತದ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಟಿ20ಯಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ್ದಾರೆ.
ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ ಮಂದಾನ 61 ಎಸೆತಗಳಲ್ಲಿ 102 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳಿದ್ದವು.
ಇದು ಅವರ ಟಿ20 ಜೀವನದ ಮೊದಲ ಶತಕವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಸ್ಮೃತಿ ಮೂರು ಶತಕಗಳಲ್ಲಿ ಬಾರಿಸಿದ್ದಾರೆ. ಇದು ಈ ಆವೃತ್ತಿಯಲ್ಲಿ ದಾಖಲಾದ ಮೊದಲ ಶತಕವೂ ಹೌದು.
ಇಂಗ್ಲೆಂಡ್‌ನ ವೆಸ್ಟರ್ನ್ ಸ್ಟಾರ್ಮ್ ತಂಡದಲ್ಲಿ ಆಡುತ್ತಿರುವ ಸ್ಮೃತಿ ಮಂದಾನ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ 48, 37, 52*, 43* ರನ್ ಗಳಿಸಿದ್ದ ಅವರು, ಈ ಪಂದ್ಯದ ಇನ್ನಿಂಗ್ಸ್‌ಅನ್ನು ಶತಕವಾಗಿ ಪರಿವರ್ತಿಸಿದರು.
ಆದರೆ, ತಮ್ಮ ಪಾದಾರ್ಪಣೆಯ ಪಂದ್ಯದಲ್ಲಿ ಸಿಕ್ಸರ್ ಬಾರಿಸಿ ಲಂಕಾಶೈರ್ ಥಂಡರ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಭಾರತದ ಮತ್ತೊಬ್ಬ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಈ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಲಂಕಾಶೈರ್, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಅಮಿ ಸಟ್ಟರ್ಥ್‌ವೇಟ್ ಅಜೇಯ 85 ರನ್ ಗಳಿಸಿದರು.
ಸ್ಮೃತಿ ಮಂದಾನ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟರ್ನ್ ಸ್ಟಾರ್ಮ್ ಈ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು 18.2 ಓವರ್‌ಗಳಲ್ಲಿ ತಲುಪಿತು.
ಗೆಲುವಿಗೆ ಕೇವಲ ಎರಡು ರನ್ ಬೇಕಿದ್ದಾಗ ಸ್ಮೃತಿ ಔಟಾದರು.
ಕೆಲವು ದಿನಗಳ ಹಿಂದಷ್ಟೇ ಅವರು 18 ಎಸೆತಗಳಲ್ಲಿ ಅರ್ಧಶತಕ ಗಳಿಸಿ, ಅತಿ ವೇಗದ ಅರ್ಧಶತಕದ ದಾಖಲೆ ನಿರ್ಮಿಸಿದ್ದರು.