ಮಹಿಳೆಯರ ಐಪಿಎಲ್ ಬಗ್ಗೆ ಖಚಿತ ನಿರ್ಧಾರ ತಿಳಿಸಿದ ಸೌರವ್ ಗಂಗೂಲಿ

ಐಪಿಎಲ್ ಆಯೋಜನೆಯ ಸಿದ್ಧತೆಯ ಮಧ್ಯೆಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಮತ್ತೊಂದು ಮಹತ್ವದ ನಿರ್ಧಾರವನ್ನು ಸ್ಪಷ್ಟಪಡಿಸಿದರು. ಕಳೆದೆರಡು ವರ್ಷಗಳಂತೆ ಈ ಬಾರಿಯೂ ಐಪಿಎಲ್ ಸಂದರ್ಭದಲ್ಲೇ ಮಹಿಳೆಯರ ಮಿನಿ ಐಪಿಎಲ್ ಟೂರ್ನಿಯೂ ನಡೆಯಲಿದೆ ಎಂದು ಗಂಗೂಲಿ ಖಚಿತಪಡಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ನಡೆಸುವ ತೀರ್ಮಾನವಾಗಿದೆ. ಈ ಟೂರ್ನಿಯ ಪ್ಲೇ-ಆಫ್ ಹಂತದ ವೇಳೆಯಲ್ಲಿ ಮಹಿಳೆಯರ ಮಿನಿ ಐಪಿಎಲ್ ಕೂಡ ನಡೆಸುವ ನಿರ್ಧಾರ ಬಿಸಿಸಿಐನದ್ದು. ಈ ಕಿರು ಟೂರ್ನಿ ಕೂಡ ಯುಎಇಯಲ್ಲೇ ನಡೆಯಲಿದ್ದು ಈ ಮೂಲಕ ಮಹಿಳಾ ಕ್ರಿಕೆಟ್ ಆಟವನ್ನು ತಾನು ಕಡೆಗಣಿಸುತ್ತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ರವಾನಿಸಿದೆ.
ಮಹಿಳೆಯರಿಗೆ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ತರಬೇತಿ ಶಿಬಿರವೂ ಆಯೋಜನೆಗೊಳ್ಳಲಿದೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಕೇಂದ್ರಿಯ ಗುತ್ತಿಗೆ ಹೊಂದಿರುವ ಮಹಿಳಾ ಕ್ರಿಕೆಟಿಗರಿಗೆ ಈಗಾಗಲೆ ಶಿಬಿರ ಆರಂಭಗೊಳ್ಳಬೇಕಾಗಿತ್ತಾದರೂ, ದೇಶದಲ್ಲಿನ ಕರೊನಾ ಪರಿಸ್ಥಿತಿಯಿಂದಾಗಿ ಇದು ಸಾಧ್ಯವಾಗಿಲ್ಲ.
ಕರೊನಾ ಹಾವಳಿಯಿಂದಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಸದ್ಯ ಬಂದ್ ಆಗಿದೆ. ಆದರೆ ನಾವು ಯೋಜನೆಯೊಂದನ್ನು ಹೊಂದಿದ್ದೇವೆ. ಮಹಿಳಾ ಕ್ರಿಕೆಟಿಗರಿಗೂ ಶಿಬಿರವನ್ನು ಆಯೋಜಿಸುವುದಂತೂ ಖಚಿತ ಎಂದು ಗಂಗೂಲಿ ತಿಳಿಸಿದ್ದಾರೆ.
ಮುಂದಿನ ವರ್ಷ ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ಗೆ ಪೂರ್ವಭಾವಿಯಾಗಿ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 2 ಪೂರ್ಣ ಪ್ರಮಾಣದ ಸರಣಿಗಳನ್ನು ಆಡುವ ಯೋಜನೆಯನ್ನು ಬಿಸಿಸಿಐ ರೂಪಿಸುತ್ತಿದೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications