Womens T20 World Cup: ಬೃಹತ್ ಮೊತ್ತ ಕಲೆಹಾಕಿದ ಆಸ್ಟ್ರೇಲಿಯಾ: ಭಾರತಕ್ಕೆ 173 ರನ್‌ಗಳ ಗುರಿ

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಟಿ20 ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕುವ ಮೂಲಕ ಭಾರತಕ್ಕೆ ಭಾರಿ ಗುರಿ ನೀಡಿದ್ದಾರೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಗಳಾದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಅತ್ಯುತ್ತಮ ಆರಂಭ ಒದಗಿಸಿದರು. 7.3 ಓವರ್ ಗಳಲ್ಲಿ ಈ ಜೋಡಿ 52 ರನ್ ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾದ ಇನ್ನಿಂಗ್ಸ್‌ಗೆ ಉತ್ತಮ ಅಡಿಪಾಯ ಹಾಕಿದರು.
ಅಲಿಸ್ಸಾ ಹೀಲಿ 26 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರೆ, ಬೆತ್ ಮೂನಿ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದರು. 37 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 54 ರನ್ ಗಳಿಸಿ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಅರ್ಧಶತಕ ಗಳಿಸಿದರು.
ಭಾರತ ತಂಡದ ಫೀಲ್ಡಿಂಗ್ ಸಾಧಾರಣವಾಗಿತ್ತು, ಹಲವು ಕ್ಯಾಚ್‌ಗಳು, ಸ್ಟಂಪೌಟ್ ಅವಕಾಶಗಳನ್ನು ಕೈಚೆಲ್ಲಿದರು. ಆಶ್ಲೆ ಗಾರ್ಡನರ್ 18 ಎಸೆತಗಳಲ್ಲಿ 31 ರನ್ ಗಳಿಸಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಗ್ರೇಸ್ ಹ್ಯಾರಿಸ್ 4 ಎಸೆತಗಳಲ್ಲಿ 7 ರನ್ ಗಳಿಸಿ ಶಿಖಾ ಪಾಂಡೆಗೆ ಕ್ಲೀನ್ ಬೌಲ್ಡ್ ಆದರು.

ಮೆಗ್ ಲ್ಯಾನಿಂಗ್ ಆರ್ಭಟ
ನಾಯಕಿ ಮೆಗ್ ಲ್ಯಾನಿಂಗ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಅಂತಿಮ ಓವರ್ ಗಳಲ್ಲಿ ಅಬ್ಬರಿಸಿದರು. 34 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 49 ರನ್ ಗಳಿಸಿ ಮಿಂಚಿದರು. 20ನೇ ಓವರ್ ನಲ್ಲಿ ಅವರು 18 ರನ್ ಗಳಿಸಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆ ಹಾಕಲು ಸಹಕಾರಿಯಾದರು.
ಭಾರತದ ಪರವಾಗಿ ಶಿಖಾ ಪಾಂಡೆ 4 ಓವರ್ ಗಳಲ್ಲಿ 32 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. ರಾಧಾ ಯಾದವ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು. ಪ್ರಮುಖ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ 4 ಓವರ್ ಗಳಲ್ಲಿ 41 ರನ್ ನೀಡುವ ಮೂಲಕ ದುಬಾರಿಯಾದರು.
ಮಹಿಳಾ ಟಿ20 ವಿಶ್ವಕಪ್‌ನಲ್ಲಿ 150ಕ್ಕಿಂತ ಹೆಚ್ಚು ಮೊತ್ತವನ್ನು ಚೇಸ್ ಮಾಡಿ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಈ ಪಂದ್ಯದಲ್ಲಿ ಗೆದ್ದರೆ ಭಾರತ ಇತಿಹಾಸ ನಿರ್ಮಿಸಲಿದೆ.

ಉಭಯ ತಂಡಗಳ ಆಡುವ ಬಳಗ
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ, ಸ್ನೇಹ ರಾಣಾ, ಶಿಖಾ ಪಾಂಡೆ, ರಾಧಾ ಯಾದವ್, ರೇಣುಕಾ ಠಾಕೂರ್ ಸಿಂಗ್.
ಆಸ್ಟ್ರೇಲಿಯಾ: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ಆಶ್ಲೆ ಗಾರ್ಡ್ನರ್, ಎಲ್ಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೇರ್‌ಹ್ಯಾಮ್, ಜೆಸ್ ಜೊನಾಸೆನ್, ಮೇಗನ್ ಸ್ಕಟ್, ಡಾರ್ಸಿ ಬ್ರೌನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications