Women's T20 World Cup: ಇಂಗ್ಲೆಂಡ್‌ಗೆ ಸೋಲು: ಫೈನಲ್ ತಲುಪಿ ಇತಿಹಾಸ ಸೃಷ್ಟಿಸಿದ ದಕ್ಷಿಣ ಆಫ್ರಿಕಾ

ಟಿ20 ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸಿದೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 6 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದೆ.
ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಶ್ರೇಷ್ಠ ಪ್ರದರ್ಶನ ನೀಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅವರು ಉತ್ತಮ ಬ್ಯಾಟಿಂಗ್ ಮಾಡಿದರು. ಆರಂಭಿಕ ಆಟಗಾರ್ತಿಯರಾದ ಲಾರಾ ವೊಲ್ವಾರ್ಟ್ ಮತ್ತು ತಜ್ಮಿನ್ ಬ್ರಿಟ್ಸ್ ಉತ್ತಮ ಆರಂಭ ಒದಗಿಸಿದರು.
13.4 ಓವರ್ ಗಳಲ್ಲಿ ಈ ಜೋಡಿ 96 ರನ್‌ಗಳನ್ನು ಕಲೆಹಾಕುವ ಮೂಲಕ ದಕ್ಷಿಣ ಆಫ್ರಿಕಾ ಉತ್ತಮ ಮೊತ್ತ ಗಳಿಸಲು ಭದ್ರ ಬುನಾದಿ ಹಾಕಿದರು. ಲಾರಾ ವೊಲ್ವಾರ್ಟ್ 44 ಎಸೆತಗಳಲ್ಲಿ 53 ರನ್ ಗಳಿಸಿ ಮಿಂಚಿದರೆ, ತಜ್ಮಿನ್ ಬ್ರಿಟ್ಸ್ 55 ಎಸೆತಗಳಲ್ಲಿ 68 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಮಾರಿಜನ್ನೆ ಕಪ್ 13 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 27 ರನ್ ಗಳಿಸುವ ಮೂಲಕ ಅಂತಿಮ ಓವರ್ ಗಳಲ್ಲಿ ಮಿಂಚು ಹರಿಸಿದರು. 20 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 164 ರನ್‌ಗಳನ್ನು ಕಲೆಹಾಕಿತು.

ಉತ್ತಮ ಆರಂಭ ಪಡೆದ ಇಂಗ್ಲೆಂಡ್
ಸವಾಲಿನ ಮೊತ್ತವನ್ನು ಕಲೆಹಾಕಿದ ಇಂಗ್ಲೆಂಡ್ ಸ್ಫೋಟಕ ಆರಂಭ ಪಡೆಯಿತು. ಸೋಫಿಯಾ ಡಂಕ್ಲೆ 16 ಎಸೆತಗಳಲ್ಲಿ 28 ರನ್ ಗಳಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದರು. 5 ಓವರ್ ಗಳಲ್ಲಿ 50 ರನ್ ಕಲೆಹಾಕುವ ಮೂಲಕ ಗುರಿಯನ್ನು ಸುಲಭವಾಗಿ ಬೆನ್ನತ್ತುವ ಉತ್ಸಾಹದಲ್ಲಿತ್ತು.
ಆದರೆ ಶಬ್ನಿಮ್ ಇಸ್ಮಾಯಿಲ್ ಬೌಲಿಂಗ್‌ನಲ್ಲಿ ತಜ್ಮಿನ್ ಬ್ರಿಟ್ಸ್ ಉತ್ತಮ ಕ್ಯಾಚ್ ಹಿಡಿಯುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದು ಮಾತ್ರವಲ್ಲದೆ ಆಲಿಸ್ ಕ್ಯಾಪ್ಸೆ ನೀಡದ ಕ್ಯಾಚ್ ಅನ್ನು ಅದ್ಭುತವಾಗಿ ಹಿಡಿಯುವ ಮೂಲಕ ಪಂದ್ಯದ ದಿಕ್ಕು ಬದಲಿಸಿದ್ದು ತಜ್ಮಿನ್ ಬ್ರಿಟ್ಸ್.

ದಕ್ಷಿಣ ಆಫ್ರಿಕಾ ಅತ್ಯುತ್ತಮ ಬೌಲಿಂಗ್
ಶಬ್ನಿಮ್ ಇಸ್ಮಾಯಿಲ್, ಅಯಾಬೊಂಗಾ ಖಾಕಾ, ನಾಡಿನ್ ಡಿ ಕ್ಲರ್ಕ್ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿಗೆ ಪ್ರಮುಖ ಕಾರಣವಾದರು. ಶಬ್ನಿಮ್ ಇಸ್ಮಾಯಿಲ್ 4 ಓವರ್ ಗಳಲ್ಲಿ 27 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು, ಅಯಾಬೊಂಗಾ ಖಾಕಾ 4 ಓವರ್ ಗಳಲ್ಲಿ 29 ರನ್ ನೀಡಿ 4 ವಿಕೆಟ್ ಪಡೆದರು. ನಾಡಿನ್ ಡಿ ಕ್ಲರ್ಕ್ 4 ಓವರ್ ಗಳಲ್ಲಿ ಕೇವಲ 17 ರನ್ ನೀಡಿ 1 ವಿಕೆಟ್ ಪಡೆದರು.
ಇದೇ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡ ಫೆಬ್ರವರಿ 26ರಂದು ಭಾನುವಾರ ಇದೇ ಅಂಗಳದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications