Womens T20 World Cup: ಹೋರಾಡಿ ಸೋಲು ಕಂಡ ಭಾರತ: ಗೆದ್ದ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶ

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶ ಪಡೆದಿದೆ.
ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ಪಾರಮ್ಯ ಮೆರೆಯುತ್ತಿರುವ ಆಸ್ಟ್ರೇಲಿಯಾ 7ನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಹಂತದಲ್ಲಿ ಭಾರತ ಕೊನೆ ಗಳಿಗೆಯಲ್ಲಿ ಅವಕಾಶವನ್ನು ತಪ್ಪಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಬೆತ್ ಮೂನಿ, ಆಶ್ಲೆ ಗಾರ್ಡನರ್, ಮೆಗ್ ಲ್ಯಾನಿಂಗ್ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿತು. ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ 7.3 ಓವರ್ ಗಳಲ್ಲಿ 52 ರನ್ ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾಗೆ ಉತ್ತಮ ಆರಂಭ ನೀಡಿದರು. ಬೆತ್ ಮೂನಿ 37 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 54 ರನ್ ಗಳಿಸಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಆಶ್ಲೆ ಗಾರ್ಡನರ್ 18 ಎಸೆತಗಳಲ್ಲಿ 31 ರನ್ ಗಳಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ನಾಯಕಿ ಮೆಗ್ ಲ್ಯಾನಿಂಗ್ 34 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 49 ರನ್ ಗಳಿಸಿದರು.
ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕುವ ಮೂಲಕ ಭಾರತಕ್ಕೆ ಭಾರಿ ಸವಾಲಿನ ಗುರಿ ನೀಡಿತು.

ಆರಂಭದಲ್ಲೇ ಆಘಾತ ಕೊಟ್ಟ ಆಸ್ಟ್ರೇಲಿಯಾ
ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಆಸ್ಟ್ರೇಲಿಯಾ ಬೌಲರ್ ಗಳು ಆಘಾತ ನೀಡಿದರು. ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ 9 ರನ್ ಗಳಿಸಿದ್ದಾಗ ಮೆಗನ್ ಸ್ಕಟ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಇವರ ಹಿಂದೆಯೇ ಸ್ಮೃತಿ ಮಂದಾನ ಕೂಡ ಆಶ್ಲೆ ಗಾರ್ಡ್ನರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಭಾರತ ತಂಡದ ಸ್ಕೋರ್ 28 ರನ್ ಆಗಿದ್ದಾಗ ಯಾಸ್ತಿಕಾ ಭಾಟಿಯಾ ರನೌಟ್ ಆಗುವ ಮೂಲಕ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಬಂದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ಅದ್ಭುತ ಬ್ಯಾಟಿಂಗ್ ಮಾಡಿದರು.

ಜಯದ ಆಸೆ ಮೂಡಿಸಿದ್ದ ಜೆಮಿಮಾ-ಹರ್ಮನ್‌ಪ್ರೀತ್
28 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ನಾಯಕಿ ಕೌರ್ ಮತ್ತು ಜೆಮಿಮಾ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 43 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದ್ದರು.
24 ಎಸೆತಗಳಲ್ಲಿ 6 ಬೌಂಡರಿ ಸಹಿತ 43 ರನ್ ಗಳಿಸಿದ್ದ ಜೆಮಿಮಾ ರೋಡ್ರಿಗಸ್ ಔಟಾದ ನಂತರ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಆಟ ಮುಂದುವರೆಸಿದರು. ರಿಚಾ ಘೋಷ್ ಜೊತೆಗೂಡಿ 36 ರನ್‌ಗಳನ್ನು ಕಲೆಹಾಕಿದರು. ಆದರೆ, ಭಾರತಕ್ಕೆ ಅದೃಷ್ಟ ಕೈಕೊಟ್ಟಿತ್ತು, ಉತ್ತಮವಾಗಿ ಆಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ ರನೌಟ್ ಆದರು.

ಕೊನೆ ಹಂತದಲ್ಲಿ ಎಡವಿದ ಭಾರತ
ರಿಚಾ ಘೋಷ್ 17 ಎಸೆತಗಳಲ್ಲಿ 14 ರನ್ ಗಳಿಸಿ ಔಟಾಗಿದ್ದು ತಂಡದ ಮೇಲೆ ಒತ್ತಡ ಬೀಳಲು ಕಾರಣವಾಯಿತು. ದೀಪ್ತಿ ಶರ್ಮಾ 17 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರೂ ತಂಡವನ್ನು ಜಯದ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್ ಗಳಲ್ಲಿ ಅದ್ಭುತ ಬೌಲಿಂಗ್, ಮಿಂಚಿನ ಫೀಲ್ಡಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿದ ಭಾರತ 5 ವಿಕೆಟ್‌ಗಳ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯಾ ಪರವಾಗಿ ಅತ್ಯುತ್ತಮ ಬೌಲಿಂಗ್ ಮಾಡಿದ ಡಾರ್ಸಿ ಬ್ರೌನ್ 4 ಓವರ್ ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದುಕೊಂಡರು. 2 ವಿಕೆಟ್ ಪಡೆದು 31 ರನ್ ಕಲೆಹಾಕಿದ ಆಲ್‌ರೌಂಡರ್ ಆಶ್ಲೆ ಗಾರ್ಡ್ನರ್ ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications