Women's T20 World Cup: ದಕ್ಷಿಣ ಆಫ್ರಿಕಾ ಕನಸು ಭಗ್ನ: 6ನೇ ಬಾರಿ ಮಹಿಳಾ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 19 ರನ್‌ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.
ಆಸ್ಟ್ರೇಲಿಯಾ ಸತತ ಎರಡನೇ ಬಾರಿಗೆ ಹ್ಯಾಟ್ರಿಕ್ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. 2010, 2012 ಮತ್ತು 2014ರಲ್ಲಿ ಸತತವಾಗಿ ಟಿ20 ವಿಶ್ವಕಪ್ ಗೆದ್ದಿದ್ದ ಆಸ್ಟ್ರೇಲಿಯಾ ನಂತರ 2018, 2020 ಮತ್ತು 2023ರಲ್ಲಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. 7 ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದು ಒಟ್ಟು 13 ವಿಶ್ವಕಪ್ ಗೆದ್ದು ದಾಖಲೆ ಬರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಕಲೆಹಾಕಿತು. ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಬೆತ್ ಮೂನಿ 53 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಸಹಿತ 74 ರನ್ ಗಳಿಸಿದರು.
ಅಲಿಸ್ಸಾ ಹೀಲಿ 20 ಎಸೆತಗಳಲ್ಲಿ 18 ರನ್ ಗಳಿಸಿದರೆ, ಗ್ರೇಸ್ ಹ್ಯಾರಿಸ್ 10 ರನ್, ಮೆಗ್ ಲ್ಯಾನಿಂಗ್ 10 ರನ್, ಎಲ್ಲಿಸ್ ಪೆರ್ರಿ 7 ರನ್ ಗಳಿಸಿದರು. ಶಬ್ನಿಮ್ ಇಸ್ಮಾಯಿಲ್ 4 ಓವರ್ ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು. ಕ್ಲೋಯ್ ಟ್ರಯಾನ್ ಮತ್ತು . ನಾನ್‌ಕುಲುಲೆಕೊ ಮ್ಲಾಬಾ ತಲಾ ಒಂದು ವಿಕೆಟ್ ಪಡೆದರು.

ರನ್ ಗಳಿಸಲು ಪರದಾಡಿದ ದಕ್ಷಿಣ ಆಫ್ರಿಕಾ
157 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಧಾನಗತಿಯ ಆರಂಭ ಪಡೆಯಿತು. ಆಸ್ಟ್ರೇಲಿಯಾದ ಶಿಸ್ತಿನ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದರು. ಮೊದಲ ಆರು ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಗಳಿಸಿದ್ದು ಕೇವಲ 22 ರನ್ ಮಾತ್ರ.
ಆರಂಭದಲ್ಲೇ ದಕ್ಷಿಣ ಆಫ್ರಿಕಾ ನಿಧಾನವಾಗಿ ರನ್ ಗಳಿಸುವ ಮೂಲಕ ಒತ್ತಡಕ್ಕೆ ಸಿಲುಕಿತು. ತಜ್ಮೀಮ್ ಬ್ರಿಟ್ಸ್ 17 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಔಟಾದರು. ಮಾರಿಜನ್ನೆ ಕಪ್ ಕೂಡ 11 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.

ಲಾರಾ ವೊಲ್ವಾರ್ಡ್ಟ್ ಅರ್ಧಶತಕ ವ್ಯರ್ಥ
ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಲಾರಾ ವೊಲ್ವಾರ್ಡ್ಟ್ ನಂತರ ಬೌಂಡರಿಗಳನ್ನು ಗಳಿಸಲು ಆರಂಭಿಸಿದರು. ಆದರೆ ಅವರಿಗೆ ಇನ್ನೊಂದು ಬದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಮೊದಲ ಆರು ಓವರ್ ಗಳಲ್ಲಿ ರನ್ ಗಳಿಸದೇ ಇದ್ದದ್ದು ದಕ್ಷಿಣ ಆಫ್ರಿಕಾಗೆ ದೊಡ್ಡ ಹಿನ್ನಡೆಯಾಯಿತು.
ನಾಯಕಿ ಸುನೆ ಲೂಸ್ 2 ರನ್ ಗಳಿಸಿ ರನೌಟ್ ಆದರು. ಕ್ಲೋಯ್ ಟ್ರಯಾನ್ 23 ಎಸೆತಗಳಲ್ಲಿ 25 ರನ್ ಗಳಿಸಿದರು, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸುವ ಮೂಲಕ 19 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತು.

ಆಸ್ಟ್ರೇಲಿಯಾ ಅತ್ಯುತ್ತಮ ಬೌಲಿಂಗ್
157 ರನ್‌ಗಳ ಸವಾಲಿನ ಗುರಿ ನೀಡಿದರೂ ಆಸ್ಟ್ರೇಲಿಯಾ ಶಿಸ್ತಿನ ಬೌಲಿಂಗ್ ಮಾಡಿತು. ಆರಂಭದಲ್ಲೇ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳನ್ನು ಕಟ್ಟಿಹಾಕುವ ಮೂಲಕ ಒತ್ತಡ ಹೇರಿತು. ಅತ್ಯುತ್ತಮ ಫೀಲ್ಡಿಂಗ್, ಉತ್ತಮ ಲೈನ್, ಲೆಂತ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳನ್ನು ಕಾಡಿದರು.
ಆಶ್ಲೆ ಗಾರ್ಡ್ನರ್ 4 ಓವರ್ ಗಳಲ್ಲಿ 20 ರನ್ ನೀಡಿ 1 ವಿಕೆಟ್ ಪಡೆದರು. ಮೆಹನ್ ಶುಟ್, ಡಾರ್ಸಿ ಬ್ರೌನ್ ಮತ್ತು ಜೆಸ್ ಜೊನಾಸ್ಸೆನ್ ತಲಾ ಒಂದು ವಿಕೆಟ್ ಪಡೆದರು. 53 ಎಸೆತಗಳಲ್ಲಿ 74 ರನ್ ಗಳಿಸಿದ ಬೆತ್ ಮೂನಿ ಪಂದ್ಯದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.
ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್ ಆಟ ಪ್ರದರ್ಶಿಸಿದ ಆಶ್ಲೆ ಗಾರ್ಡ್ನರ್ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications