Women's T20 World Cup: ಕೊನೆಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಭಾರತ ಗೆಲುವಿನ ನಗೆ ಬೀರಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತಿದ್ದ ಭಾರತದ ಮಹಿಳಾ ತಂಡ, ಕೊನೆಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ದಕ್ಷಿಣ ಆಫ್ರಿಕಾದ ಸ್ಟೆಲೆನ್‌ಬೋಷ್ ಯುನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯದದಲ್ಲಿ ಭಾರತ ಅತ್ಯುತ್ತಮ ಆಟವಾಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು.
ಭಾರತ ತಂಡದ ಆರಂಭವೇನು ಉತ್ತಮವಾಗಿ ಇರಲಿಲ್ಲ. ಆರಂಭಿಕ ಬ್ಯಾಟರ್ ಯಾಸ್ತಿಕಾ ಭಾಟಿಯಾ 10 ರನ್ ಗಳಿಸಿ ಔಟಾದರೆ, ಶಫಾಲಿ ವರ್ಮಾ 9 ರನ್ ಗಳಿಸಿ ನಿರ್ಗಮಿಸಿದರು. ಹರ್ಲೀನ್ ಡಿಯೋಲ್ 10 ರನ್ ಗಳಿಸುವಷ್ಟರಲ್ಲಿ ಔಟಾದರು.
35 ರನ್ ಗಳಾಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಆಸರೆಯಾಗಿದ್ದು, ವಿಕೆಟ್ ಕೀಪರ್ ಬ್ಯಾಟರ್ ರಿಷಾ ಘೋಷ್ ಮತ್ತು ಜೆಮಿಮಾ ರೋಡ್ರಿಗಸ್. ಈ ಜೋಡಿ 4ನೇ ವಿಕೆಟ್‌ಗೆ 92 ರನ್‌ಗಳನ್ನು ಕಲೆಹಾಕುವ ಮೂಲಕ ಉತ್ತಮ ಮೊತ್ತ ದಾಖಲಿಸಲು ಕಾರಣವಾದರು.
ಜೆಮಿಮಾ ರೋಡ್ರಿಗಸ್ 27 ಎಸೆತಗಳಲ್ಲಿ 41 ರನ್ ಗಳಿಸಿದರೆ. ರಿಷಾ ಘೋಷ್ 56 ಎಸೆತಗಳಲ್ಲಿ 3 ಬೌಂಡರಿ 9 ಸಿಕ್ಸರ್ ನೆರವಿನಿಂದ ಅಜೇಯ 91 ರನ್ ಗಳಿಸಿದರು. ಪೂಜಾ ವಸ್ತ್ರಾಕರ್ ಕೊನೆಯ ಓವರ್ ಗಳಲ್ಲಿ 4 ಎಸೆತಗಳಲ್ಲಿ 13 ರನ್ ಗಳಿಸಿದರು. 20 ಓವರ್ ಗಳ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು.

ಭಾರತದ ಉತ್ತಮ ಬೌಲಿಂಗ್
184 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ಯಾವುದೇ ಹಂತದಲ್ಲಿ ಕೂಡ ಭಾರತಕ್ಕೆ ಸವಾಲು ಹಾಕಲಿಲ್ಲ. ಭಾರತದ ಉತ್ತಮ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದರು.
20 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 131 ರನ್ ಗಳಿಸುವ ಮೂಲಕ 52 ರನ್‌ಗಳ ಸೋಲೊಪ್ಪಿಕೊಂಡಿತು. ದೇವಿಕಾ ವೈದ್ಯ 2 ವಿಕೆಟ್ ಪಡೆದು ಮಿಂಚಿದರು. ರಾಜೇಶ್ವರಿ ಗಾಯಕ್ವಾಡ್, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಶಫಾಲಿ ವರ್ಮಾ ತಲಾ ಒಂದು ವಿಕೆಟ್ ಪಡೆದರು.
ಫೆಬ್ರವರಿ 10 ರಿಂದ ಮಹಿಳಾ ಟಿ20 ವಿಶ್ವಕಪ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಶ್ರೀಲಂಕಾ ವಿರುದ್ಧ ಸೆಣೆಸಲಿದೆ. ಭಾರತ ತಂಡದ ಮೊದಲೇ ಪಂದ್ಯವನ್ನು ಫೆಬ್ರವರಿ 12ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications